ನ್ಯೂಸ್

ಮಳೆ ಬಿದ್ದರೆ ಮಾತ್ರ ಪಾರದರ್ಶಕ! ಉಳಿದ ಸಮಯದಲ್ಲಿ ಬಿಳಿ ಬಣ್ಣ; ಅಚ್ಚರಿ ಮೂಡಿಸುತ್ತೆ 'ಅಸ್ಥಿಪಂಜರ​ ಹೂ' ವಿಶೇಷತೆ​ | Skeleton Flower

ಮೋಹನ್​ ಶೆಟ್ಟಿ

Skeleton Flower: ಜಗತ್ತಿನ ಹೂಗಳ ರಾಶಿಯಲ್ಲಿ ಒಂದಲ್ಲ, ಎರಡಲ್ಲ ಲೆಕ್ಕಕ್ಕೆ ಸಿಗದಷ್ಟು ತರಹೇವಾರಿ ಹೂವುಗಳಿವೆ. ಮಲ್ಲಿಗೆ, ಸಂಪಿಗೆ, ಸಾವಂತಿಗೆ, ಸುಗಂಧರಾಜ, ಕನಕಾಂಬರ​, ಕೆಂಡ ಸಂಪಿಗೆ, ತಾವರೆ, ಚೆಂಡು ಹೂ, ದಾಸವಾಳ, ಗಣಗಲೆ, ಗುಲಾಬಿ, ಸೂರ್ಯಕಾಂತಿ, ಪಾರಿಜಾತ, ತುಂಬೆ, ಸೇವಂತಿಗೆ ಸೇರಿದಂತೆ ಮುಂತಾದ ಹೂವುಗಳು ನಮ್ಮೆಲ್ಲರಿಗೂ ಚಿರಪರಿಚಿತ. ಪ್ರತಿ ಹೂವಿಗೂ ಅದರದ್ದೇ ಆದ ವೈಶಿಷ್ಟ್ಯ, ವಿಶಿಷ್ಟತೆಗಳಿವೆ. ಈ ಎಲ್ಲಾ ಹೂವುಗಳನ್ನು ಮೀರಿ ಒಂದಷ್ಟು ಮಾತ್ರ ಬಹಳ ಅಪರೂಪವಾಗಿದ್ದು, ವಿಶೇಷ ಹಾಗೂ ವಿಭಿನ್ನತೆಯನ್ನು ಹೊಂದಿವೆ. ನಾವು ತಿಳಿಸಿದ ಹೂವು ಕೂಡ ಇದೇ ಸಾಲಿಗೆ ಸೇರುತ್ತದೆ.

ಮಳೆ ಹನಿ

ಇತ್ತೀಚಿನ ದಿನಗಳಲ್ಲಿ ಜಗತ್ತಿನ ಯಾವ ಮೂಲೆಯಲ್ಲಿ ಯಾವ ಹೂವು, ಹಣ್ಣು ಬೆಳೆದರೂ ಅವುಗಳ ಫೋಟೋ ಅಥವಾ ವಿಡಿಯೋಗಳು ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತವೆ. ನಮಗೆ ಗೊತ್ತಿರದ ಹಾಗೂ ವಿಚಿತ್ರ ಅನಿಸುವ ಅದೆಷ್ಟೋ ಮಾಹಿತಿಗಳು ಇಲ್ಲಿ ಗೋಚರವಾಗುತ್ತವೆ. ಸದ್ಯ ಈ ಹೂವು ಕೂಡ ಅದೇ ಹಾದಿಯಲ್ಲಿದೆ. ತೀರ ವಿಚಿತ್ರ ಅನಿಸಿದರೂ ಇದೇ ಸತ್ಯ. ಅಸ್ಥಿಪಂಜರ ಹೂವು ಎಂದೇ ಗುರುತಿಸಿಕೊಂಡಿರುವ ಈ ಹೂವು, ಮಳೆ ಹನಿ ಬಿದ್ದರೆ ಮಾತ್ರ ತನ್ನ ಬಣ್ಣವನ್ನು ಪೂರ ಪಾರದರ್ಶಕವಾಗಿ ಬದಲಿಸುತ್ತದೆ.

ಸಣ್ಣ ಹೂವಿನಂತೆ ಕಾಣಿಸುವ ಅಸ್ಥಿಪಂಜರ ಹೂವು, ತೆಳುವಿನ ಬಿಳಿ ದಳಗಳಿಂದ ಕೂಡಿದೆ. ವರ್ಷವಿಡೀ ಅರಳುವ ಈ ಹೂವುಗಳು, ಮಳೆಗಾಲ ಬಂದರೆ ಸಾಕು ಸಂಪೂರ್ಣವಾಗಿ ಪಾರದರ್ಶಕವಾಗಿಬಿಡುತ್ತವೆ. ಥೇಟ್​ ಗಾಜಿನ ಬಾಗಿಲಿನಂತೆ. ಅದರ ಕಳೆಗಿನ ನೆಲವು ಕಾಣಿಸುವಷ್ಟು ಪಾರದರ್ಶಕ. ಮಳೆ ಹನಿ ಅಥವಾ ನೀರು ತನ್ನ ಮೇಲೆ ಬಿದ್ದ ತಕ್ಷಣವೇ ಈ ಹೂವು ಅದರ ವಿಶಿಷ್ಟತೆಯನ್ನು ಪ್ರದರ್ಶಿಸುತ್ತದೆ. ಅದೇ ಮಳೆ ನಿಂತು. ಹೂವಿನ ದಳದ ಮೇಲಿರುವ ಹನಿ ಒಣಗಿದ ಕೂಡಲೇ ಬಿಳಿ ಬಣ್ಣವು ಮರಳುತ್ತದೆ. ಇದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.

ಈ ಅಸ್ಥಿಪಂಜರ ಹೂವುಗಳು ಜಪಾನ್‌ನ ಶೀತದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕಾಡುಗಳಲ್ಲಿನ ಇಳಿಜಾರು ಸ್ಥಳಗಳಲ್ಲಿ ಈ ಹೂವು ಬೆಳೆಯುತ್ತವೆ,(ಏಜೆನ್ಸೀಸ್​).