ನವದೆಹಲಿ: ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಯೋಧನನ್ನು ರಕ್ಷಣೆ ಮಾಡಿದ 6 ವರ್ಷದ ಸೇನಾ ಶ್ವಾನ ಕೆಂಟ್, ಉಗ್ರರ ಗುಂಡೇಟಿಗೆ ಉಸಿರು ಚೆಲ್ಲಿದ ಮನಕಲಕುವ ಘಟನೆ ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಇಂದು (ಸೆ. 13) ನಡೆದಿದೆ.
ರಜೌರಿಯ ನರ್ಲಾ ಗ್ರಾಮದಲ್ಲಿ ಯೋಧರು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ವೇಳೆ ಸೇನಾ ತುಕ್ಕಡಿಯೊಂದನ್ನು ಮುನ್ನಡೆಸುತ್ತಿದ್ದ ಕೆಂಟ್, ಉಗ್ರರ ಗುಂಡೇಟಿಗೆ ಬಲಿಯಾಗಿದೆ.
ಕೆಂಟ್ ಒಂದು ಲ್ಯಾಬ್ರಡಾರ್ ತಳಿಯ ಹೆಣ್ಣು ನಾಯಿ. 21ನೇ ಸೇನಾ ಶ್ವಾನ ಘಟಕದಲ್ಲಿ ಸೇವೆ ಸಲ್ಲಿಸುತ್ತಿತ್ತು. 'ಆಪರೇಷನ್ ಸುಜಲಿಗಾಲ'ದಲ್ಲಿಯೂ ಮುಂಚೂಣಿಯಲ್ಲಿತ್ತು. ಪಲಾಯನಗೈದ ಭಯೋತ್ಪಾದಕರ ಜಾಡು ಹಿಡಿದು ಸೈನಿಕರ ತುಕ್ಕಡಿಯನ್ನು ಕೆಂಟ್ ಮುನ್ನಡೆಸುತ್ತಿತ್ತು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ತನ್ನ ನಿರ್ವಾಹಕನ ಪ್ರಾಣವನ್ನು ಉಳಿಸಿ, ಕೆಂಟ್ ತನ್ನ ಉಸಿರು ಚೆಲ್ಲಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಜೌರಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಶಂಕಿತ ಪಾಕಿಸ್ತಾನಿ ಭಯೋತ್ಪಾದಕ ಮೃತಪಟ್ಟಿದ್ದಾನೆ ಮತ್ತು ಭಾರತೀಯ ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಅಲ್ಲದೆ, ಗುಂಡಿನ ಚಕಮಕಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. (ಏಜೆನ್ಸೀಸ್)