ಬೆಂಗಳೂರು: ಬರುವ ಜುಲೈ ತಿಂಗಳಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಒಂದು ವರ್ಷದ ಅವಧಿ ಪೂರ್ಣಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಬೃಹತ್ ಪ್ರಮಾಣದ ಬದಲಾವಣೆ ಆಗುವ ಸಾಧ್ಯತೆ ಇದೆ.
ಇದಾಗಲೇ ಪಕ್ಷದ ಹೈಕಮಾಂಡ್‌ಗಳು ಈ ಕುರಿತು ಸೂಚನೆ ನೀಡಿದ್ದು, ಹೊಸ ಮುಖಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಆರು ಮಂದಿ ಹಿರಿಯ ಮುಖಂಡರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಈ ಸ್ಥಾನಕ್ಕೆ ಹೊಸಮುಖಗಳು ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ.
ಹಲವು ವರ್ಷಗಳಿಂದ ಕೆಲವರಿಗೆ ವಿಶೇಷ ಸ್ಥಾನಮಾನ ಸಿಗುತ್ತಿರುವ ಕುರಿತಂತೆ ಪಕ್ಷದ ಒಳಗಡೆ ಅಸಮಾಧಾನ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಸಂಪುಟದ ಪುನರ್‌ರಚನೆಗೆ ಮಾತು ಕೇಳಿಬರುತ್ತಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
2006ರಲ್ಲಿ ಬಿಜೆಪಿಯು ಜೆಡಿಎಸ್ ಜತೆ ಮೈತ್ರಿ ಸರ್ಕಾರ ರಚನೆ ಮಾಡಿದಾಗಿನಿಂದಲೂ ಕೆಲವರು ಹಿರಿಯ ಮುಖಂಡದರು ಪಕ್ಷದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಸ್ಥಾನದಿಂದ ಅವರನ್ನು ಕೆಳಕ್ಕೆ ಇಳಿಸಿ, ಯುವಕರಿಗೆ ಅವಕಾಶ ಕಲ್ಪಿಸುವ ಬಗ್ಗೆ ಮಾತುಕತೆ ನಡೆದಿದೆ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡರೆ ಹೊಸಮುಖಗಳನ್ನು ಪರಿಚಯ ಮಾಡಿಸುವುದು ಅವಶ್ಯವಾಗಿದೆ. ಇದು ಚುನಾವಣೆಯಲ್ಲಿಯೂ ಉತ್ತಮ ಫಲಿತಾಂಶ ತರಲಿದೆ ಎಂದು ಪಕ್ಷದ ರಾಷ್ಟ್ರೀಯ ಮುಖಂಡರೊಬ್ಬರು ಹೇಳಿದ್ದಾರೆ.
ಸದ್ಯ ಸಚಿವ ಸಂಪುಟದಲ್ಲಿ 34 ಸ್ಥಾನಗಳಿದ್ದು, ಆರು ಸ್ಥಾನಗಳು ಖಾಲಿ ಇವೆ.