ನ್ಯೂಸ್

ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ರಾಡ್​​​ನಿಂದ ಹೊಡೆದು ಯುವತಿಯ ಹತ್ಯೆ!

ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿ ಯುವತಿಯ ಮೇಲೆ ರಾಡ್​​​​ನಿಂದ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಡ್‌ನಿಂದ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅರಬಿಂದೋ ಕಾಲೇಜು ಬಳಿ ಈ ಘಟನೆ ನಡೆದಿದ್ದು, ಯುವತಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಘಟನೆಯ ವಿವರ

ಶುಕ್ರವಾರ ಮಧ್ಯಾಹ್ನ 12.08ರ ಸುಮಾರಿಗೆ ಅರಬಿಂದೋ ಕಾಲೇಜು ಬಳಿ 25 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಮೃತದೇಹದ ಬಳಿ ಕಬ್ಬಿಣದ ರಾಡ್ ಕೂಡ ಪತ್ತೆಯಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್​​ಐ ವರದಿ ಮಾಡಿದೆ. ವರದಿಗಳ ಪ್ರಕಾರ, ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿನಿ ಮಹಿಳೆಯ ಮೇಲೆ ಪಾರ್ಕ್‌ನೊಳಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಅರಬಿಂದೋ ಕಾಲೇಜು ಬಳಿಯ ವಿಜಯ್ ಮಂಡಲ್ ಪಾರ್ಕ್‌ನ ಶಿವಾಲಿಕ್ ಎ ಬ್ಲಾಕ್‌ನಲ್ಲಿ ಯುವಕನು ಯುವತಿಯನ್ನು ಕೊಂದು ಓಡಿ ಹೋಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ದಕ್ಷಿಣ ಡಿಸಿಪಿ ಚಂದನ್ ಚೌಧರಿ ಎಎನ್‌ಐಗೆ ತಿಳಿಸಿದ್ದಾರೆ.

“ಪಾರ್ಕ್‌ನೊಳಗೆ ಈ ಘಟನೆ ನಡೆದಿದೆ. ಮೃತರು ಕಾಲೇಜು ವಿದ್ಯಾರ್ಥಿ. ತನ್ನ ಸ್ನೇಹಿತೆಯ ಜೊತೆ ಪಾರ್ಕ್ ಗೆ ಬಂದಿದ್ದಳು. ಮೃತಳ ತಲೆಯ ಮೇಲೆ ಗಾಯಗಳಾಗಿವೆ. ಆಕೆಯ ಶವದ ಬಳಿ ರಾಡ್ ಕೂಡ ಪತ್ತೆಯಾಗಿದೆ. ಉದ್ಯಾನವನದ ಬೆಂಚಿನ ಕೆಳಗೆ ತಲೆಯಿಂದ ರಕ್ತ ಬಿದ್ದಿದ್ದ ಯುವತಿಯ ಶವವನ್ನು ಪತ್ತೆ ಮಾಡಲಾಯ್ತು. ಈ ಪಾರ್ಕ್‌ಗೆ ಕಾಲೇಜು ಹುಡುಗ-ಹುಡುಗಿಯರು ಆಗಾಗ ಬರುತ್ತಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ'' ಎಂದು ಡಿಸಿಪಿ ತಿಳಿಸಿದ್ದಾರೆ.