ನ್ಯೂಸ್

ಮನೆ ಬಳಿ ಬಂದವರಿಗೆ ಸಾಕುನಾಯಿ ಕಚ್ಚಿದರೆ ಮಾಲೀಕರಿಗೆ 6 ತಿಂಗಳು ಜೈಲು, ದಂಡ: ಪೊಲೀಸರ ಎಚ್ಚರಿಕೆ

ಕೊಡಗು: ಮನೆ ಮುಂದೆ 'ನಾಯಿ ಇದೆ ಎಂದು ಎಚ್ಚರಿಕೆ' ಎಂದು ಬೋರ್ಡ್ ತಗುಲಿಸಿ ಸುಮ್ಮನಾದರೆ ಸಾಕಾಗುವುದಿಲ್ಲ. ಇನ್ನುಮುಂದೆ ಮಾಲೀಕರೂ ಸಾಕುನಾಯಿ ಕುರಿತು ಎಚ್ಚರಿಕೆಯಿಂದ ಇರಬೇಕು. ಹಾಗಂತ ಪೊಲೀಸರೇ ಎಚ್ಚರಿಕೆಯನ್ನು ನೀಡಿದ್ದಾರೆ.

ಇತ್ತೀಚೆಗೆ ಕೊಡಗು ಜಿಲ್ಲೆಯ ನಾಪೊಕ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಪಾರಾಣೆ ಗ್ರಾಮದ ನಿವಾಸಿ ಬೆಳತಂಡ ಮಾಚಯ್ಯ ಅವರ ಮನೆಗೆ ಮಗುವಿನ ಆರೋಗ್ಯ ತಪಾಸಣೆಗಾಗಿ ಬಂದಿದ್ದ ಸಮುದಾಯ ಆರೋಗ್ಯ ಅಧಿಕಾರಿಗೆ ಸಾಕುನಾಯಿ ಕಚ್ಚಿತ್ತು. ಈ ಹಿನ್ನೆಲೆಯಲ್ಲಿ ಮಾಚಯ್ಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ಹಿನ್ನೆಲೆಯಲ್ಲಿ ಕೊಡಗು ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ. ಸಾಕುನಾಯಿಗಳು ಬೇರೆಯವರ ಮೇಲೆ ದಾಳಿ ಮಾಡಿದರೆ ಅಂಥ ನಾಯಿಗಳನ್ನು ಸಾಕಿದ ಮಾಲೀಕರ ವಿರುದ್ಧ ಸೆಕ್ಷನ್ 289 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರು ತಿಂಗಳು ಜೈಲುವಾಸ ಹಾಗೂ ದಂಡವನ್ನು ವಿಧಿಸಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.