- ಮೇ ಮೂರನೇ ವಾರದಲ್ಲಿ ಆರು ಸಿನಿಮಾಗಳು ತೆರೆಗೆ
- ಮಾಸ್, ಮಕ್ಕಳ ಹಾಗೂ ವಿಷಯಾಧಾರಿತ ಚಿತ್ರಗಳು ರಿಲೀಸ್
- ಕಾನ್ಸ್ ಗಮನಸೆಳೆದ ಪ್ರಿಯಾಂಕಾ ಕನ್ನಡ ಪ್ರೇಕ್ಷಕರ ಗೆಲ್ಯಾರಾ ಕಾದುನೋಡಬೇಕಿದೆ
ಬೆಂಗಳೂರು: ಈ ಶುಕ್ರವಾರಕ್ಕೆ (ಮೇ 22) ವಿವಿಧ ಜಾನರ್ ಕನ್ನಡದ ಆರು ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಮೂಲಕ ಸ್ಯಾಂಡಲ್‌ವುಡ್ ಸಿಕ್ಸರ್ ಬಾರಿಸುತ್ತದೆ. ನಾಲ್ಕೂವರೆ ತಿಂಗಳಿಗೆ ಈಗಾಗಲೇ ಕನ್ನಡದ 103 ಸಿನಿಮಾಗಳು ರಿಲೀಸ್ ಆಗಿದ್ದು, ಈ ವಾರದ ಆರು ಚಿತ್ರಗಳು ಸೇರಿದರೆ ಒಟ್ಟು 109 ಚಿತ್ರಗಳು ಬಿಡುಗಡೆಯಾದಂತಾಗುತ್ತದೆ. ಹಾಗಾದರೆ, ನಾಳೆ ತೆರೆ ಮೇಲೆ ಬರುತ್ತಿರುವ ಆರು ಕನ್ನಡ ಸಿನಿಮಾಗಳ ಯಾವ್ಯಾವು, ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
22ಕ್ಕೆ ‘ಸೆಪ್ಟೆಂಬರ್ 21’
ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ, 22 ವರ್ಷದ ಕರೆನ್ ಕ್ರಿಷ್ಟಿ ಸುವರ್ಣ ನಿರ್ದೇಶನದ ಚಿತ್ರ ‘ಸೆಷ್ಟೆಂಬರ್ 21’. ಈಗಾಗಲೇ ಪ್ರತಿಷ್ಠಿತ ಕಾನ್ಸ್ ಫಿಲಂ ಫೆಸ್ಟಿವಲ್‌ನಲ್ಲಿ ಈ ಸಿನಿಮಾ ಪ್ರದರ್ಶನಗೊಂಡು ಗಮನಸೆಳೆದಿದೆ. ಇದೀಗ ಥಿಯೇಟರಿಕಲ್ ಆಗಿ ಬಿಡುಗಡೆಯಾಗುತ್ತಿದ್ದು, ಕನ್ನಡ, ಹಿಂದಿಯಲ್ಲಿ ಮೂಡಿಬರುತ್ತಿದೆ. ಪ್ರಿಯಾಂಕಾ ಉಪೇಂದ್ರ ಜತೆಗೆ ಪ್ರವೀಣ್ ಸಿಂಗ್ ಸಿಸೋಡಿಯಾ, ಜರೀನಾ ವಹಾಬ್, ಅಮಿತ್ ಬೆಹ್ಲ್, ರಿಕ್ಕಿ ರುದ್ರಾ ತಾರಾಗಣದಲ್ಲಿದ್ದಾರೆ. ಅಲ್ಝೆಮೇರಿಯಾ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಸುತ್ತ ಈ ಸಿನಿಮಾ ಸಾಗುತ್ತದೆ.
ನಾಳೆ ‘ಲಾಕ್‌ಡೌನ್’
2021ರಲ್ಲಿ ವ್ಯಾಪಕವಾಗಿ ಕರೊನಾ ಹರಡಿದ್ದರಿಂದ ಪ್ರಪಂಚಾದ್ಯಂತ ಲಾಕ್‌ಡೌನ್ ವಿಧಿಸಲಾಗಿತ್ತು. ಈ ಲಾಕ್‌ಡೌನ್ ಸಮಯದಲ್ಲಿ ಅರಳಿದ ಒಂದು ನವಿರಾದ ಪ್ರೇಮಕಥೆಯನ್ನು ಇಟ್ಟುಕೊಂಡು ತಯಾರಾಗಿರುವ ‘ಲಾಕ್‌ಡೌನ್’ ಚಿತ್ರ ಈ ವಾರ ತೆರೆ ಮೇಲೆ ಬರುತ್ತಿದೆ. ಬಳ್ಳಾರಿ ಮೂಲದ ಜಾವೇದ್ ತಿಪ್ಪನಹಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ವ್ನಿೇಶ್, ವಾಣಿಶ್ರೀ, ಮಂಜು ಮುದಗಲ್, ಶ್ರಾವಣಿ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ.
‘ಅಸುರನ ಕೈಯಲ್ಲಿ ಪಾರಿಜಾತ’
ತೇಜಸ್ವಿ ವಿಘ್ನೇಶ್ ನಿರ್ದೇಶನದ ಯಶ್ ಶೆಟ್ಟಿ, ಪ್ರಮೋದ್ ಶೆಟ್ಟಿ ಕಲಾಬಳಗದಲ್ಲಿರುವ ‘ಅಸುರನ ಕೈಯಲ್ಲಿ ಪಾರಿಜಾತ’ ತೆರೆಗೆ ಬರುತ್ತಿದೆ. ರೊಮ್ಯಾಂಟಿಕ್,ಕ್ರೈಂ, ಥ್ರಿಲ್ಲರ್‌ನ ಕಥೆಯಲ್ಲಿ ರಜಿನಿ ಗೌಡ, ಕ್ರಿಸ್ಟೋರ್ ಜೇಸನ್, ಕೆ.ಎಸ್.ಶ್ರೀಧರ್, ಮಂಜುನಾಥ್ ಹೆಗಡೆ, ಪ್ರಬೀಕ್ ಮೊಗವೀರ ತಾರಾಗಣದಲ್ಲಿದ್ದಾರೆ. ಮಹಿಳಾ ಪ್ರಧಾನ ಸಾಹಸಮಯ ‘ಉಗ್ರಮರ್ಧಿನಿ’ ಶುಕ್ರವಾರ ತೆರೆಗೆ ಬರುತ್ತಿದೆ. ಸತ್ಯನಾರಾಯಣ್ ಭೀಮ್ ರಾಮ್ ನಿರ್ದೇಶನದ ಈ ಆ್ಯಕ್ಷನ್ ಚಿತ್ರದಲ್ಲಿ ಆಯೇಷಾ ಮುಖ್ಯಭೂಮಿಕೆಯಲ್ಲಿದ್ದು ಸೂರಜ್ ಸಾಸನೂರು, ಮುನಿ, ಹರೀಶ್, ರಾಘವೇಂದ್ರ ಪ್ರಸಾದ್ ನಟಿಸಿದ್ದಾರೆ.
‘ಕುಚುಕು’ ಗೆಳೆಯರ ‘ಮಕ್ಕಳ ಸೈನ್ಯ’
ಈ ವಾರ ಎರಡು ಸದಭಿರುಚಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮೈಸೂರು ರಾಜು ನಿರ್ದೇಶನದ ‘ಕುಚುಕು’ ಚಿತ್ರದಲ್ಲಿ ಅರ್ಜುನ್ ಚವಾಣ್, ಪ್ರಿಯದರ್ಶಿನಿ ಗೌಡ, ಬಸವರಾಜ್, ಸೈಕೋ ಶಿವಾಜಿ, ರಮೇಶ್ ಪಂಡಿತ್, ಶಂಕರ್ ಅಶ್ವತ್ಥ್ ಕಲಾಬಳಗದಲ್ಲಿದ್ದಾರೆ. ರಾಮಣ್ಣ ಮತ್ತು ವಿಷಕಂಠ ಎಂಬ ಇಬ್ಬರುಬ ಗೆಳೆಯರ ಕಥೆ ಇದಾಗಿದೆ. ಇನ್ನು ಈ ವಾರ ‘ಮಕ್ಕಳ ಸೈನ್ಯ’ ಮಕ್ಕಳ ಪ್ರಧಾನ ಸಿನಿಮಾ ಬಿಡುಗಡೆಯಾಗುತ್ತಿದೆ. ಗಗನ, ಮಹಾಲಕ್ಷ್ಮೀ, ಪರಿಣಿತ್, ರಘು ನಟಿಸಿದ್ದು ಸುನಿಲ್ ಕುಮಾರ್ ನಿರ್ದೇಶಿಸಿದ್ದಾರೆ.