ನ್ಯೂಸ್

ಪಂಜಾಬ್​ನಲ್ಲಿ ಕರೊನಾದಿಂದಾಗಿ ಮೃತನಾದ ವೃದ್ಧನ ಮನೆಯ 6 ಜನರಲ್ಲಿ ಸೋಂಕು ಪತ್ತೆ

ಚಂಡೀಗಢ್​: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಪ್ರಪಂಚದಾದ್ಯಂತ 11 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕರೊನಾ ವೈರಸ್​ಗೆ ದೇಶದಲ್ಲಿ ಐದು ಜನರು ಮೃತರಾಗಿದ್ದಾರೆ. ಪಂಜಾಬ್​ನಲ್ಲಿ ಕರೊನಾ ವೈರಸ್​ನಿಂದಾಗಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಸ್ಥರಲ್ಲಿ ಆರು ಜನರಲ್ಲಿ ಸೋಂಕಿರುವುದು ದೃಢವಾಗಿದೆ.

ಪಂಜಾಬ್​ನ ನವಾನ್​ಶಹರ್​ ಮೂಲದ 70 ವರ್ಷದ ವ್ಯಕ್ತಿ 17 ಜನರ ಕೂಡು ಕುಟುಂಬದಲ್ಲಿ ಬದುಕುತ್ತಿದ್ದ. ಇತ್ತೀಚೆಗೆ ಜರ್ಮನಿ ಪ್ರವಾಸ ಕೈಗೊಂಡ ಆತ ದೇಶಕ್ಕೆ ವಾಪಾಸಾಗುವಾಗ ಇಟಲಿ ಮೂಲಕ ಬಂದಿದ್ದಾನೆ. ಮಾರ್ಚ್​ 6 ರಂದು ಪಂಜಾಬ್​ಗೆ ಬಂದಿಳಿದ ವ್ಯಕ್ತಿಗೆ ಮಂಗಳವಾರದಂದು ಎದೆ ನೋವು ಕಾಣಿಸಿಕೊಂಡಿದ್ದು, ಬಂಗಾ ಸಿವಿಲ್​ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಮರಣ ಹೊಂದಿದ್ದು, ಆತನ ಸಾವಿನ ನಂತರ ಆತನಲ್ಲಿ ಕರೊನಾ ವೈರಸ್​ ಇರುವುದಾಗಿ ವೈದ್ಯಕೀಯ ವರದಿ ಬಂದಿತ್ತು.

ವೃದ್ಧನ ಸಾವಿನ ನಂತರ ಆತನ ಮನೆಯಲ್ಲಿದ್ದ 16 ಜನರನ್ನು ತಪಾಸಣೆ ನಡೆಸಲಾಗಿದೆ. ಅದರಲ್ಲಿ ಆತನ ಮೂರು ಜನ ಗಂಡು ಮಕ್ಕಳು, ಒಬ್ಬಳು ಮಗಳು, ಒಬ್ಬಳು ಸೊಸೆ ಮತ್ತು ಒಬ್ಬ ಮೊಮ್ಮಗುವಿಗೆ ಕರೊನಾ ಸೋಂಕು ತಗುಲಿರುವುದು ಧೃಡವಾಗಿದೆ.

ಇಂದು ವೃದ್ಧನ ಕುಟುಂಬದ ಆರು ಜನ ಸೇರಿದಂತೆ ಒಟ್ಟು ರಾಜ್ಯದ ಏಳು ಜನರಲ್ಲಿ ಸೋಂಕಿರುವುದು ದೃಢವಾಗಿದೆ. ಈ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 13ಕ್ಕೆ ಏರಿದೆ. (ಏಜೆನ್ಸೀಸ್​)