ಆನಂದಪುರದ ಮುರುಘಾಮಠದಲ್ಲಿ ಏರ್ಪಡಿಸಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅನಿತಾ ಹೆಗ್ಗೋಡು ಅವರಿಗೆ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸನ್ಮಾನಿಸಿದರು. ಡಾ. ಕೆ.ಎಂ.ಸುನೀಲ್ ಇತರರಿದ್ದರು. 
ನ್ಯೂಸ್

ಶಿವಶರಣರ ವಚನ ಪ್ರತಿಜ್ಞಾವಿಧಿಗೆ ಸಮಾನ

ಆನಂದಪುರ: ಬಸವಾದಿ ಶಿವಶರಣರ ವಚನಗಳು ನಿತ್ಯ ಜೀವನದಲ್ಲಿ ಆಚರಣೆಗೆ ಯೋಗ್ಯವಾದವು. ಪ್ರತಿಜ್ಞಾವಿಧಿಗೆ ಸಮಾನ ಗೌರವದ ಸ್ಥಾನಮಾನ ಹೊಂದಿವೆ ಎಂದು ಕನ್ನಡ ಉಪನ್ಯಾಸಕಿ ಅನಿತಾ ಹೆಗ್ಗೋಡು ಹೇಳಿದರು.

ಸಮೀಪದ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿ, ವಚನಕಾರರು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಕಣ್ಣಾರೆ ಕಂಡು, ಸಮಾಜದ ಓರೆಕೋರೆ ತಿದ್ದಿ ಅತ್ಯುತ್ತಮ ಬದುಕಿಗೆ ಮಾರ್ಗದರ್ಶನ ನೀಡಿದರು. ಸ್ವತಃ ಆದರ್ಶ ಬದುಕು ನಡೆಸಿ ಬೇರೆಯವರಿಗೆ ಪ್ರೇರಣೆ ನೀಡಿದವರು. ಒಂದೊಂದು ವಚನವೂ ವ್ಯಕ್ತಿತ್ವ ವಿಕಾಸಕ್ಕೆ ಮೆಟ್ಟಿಲು ಎಂದು ತಿಳಿಸಿದರು.

ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಯಾವ ಧರ್ಮವೂ ಕೀಳಲ್ಲ. ಎಲ್ಲವೂ ಮಾನವೀಯ ನೆಲೆಯಲ್ಲಿ ಆಚರಿಸಲ್ಪಡಬೇಕು. ದಯೆಯಿಲ್ಲದ ಧರ್ಮ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಬಸವಣ್ಣನವರು ವಚನಗಳ ಮೂಲಕ ಬದುಕುವುದನ್ನು ಕಲಿಸಿದ ಮಹಾನ್ ದಾರ್ಶನಿಕ. ಎಲ್ಲ ಬಗೆಯ ಕೆಲಸಗಳೂ ಮಹತ್ವದ್ದಾಗಿವೆ. ಕಾಯಕವೇ ಶ್ರೇಷ್ಠ ಎಂದು ಸಾರಿದರು. ಜಾತಿ-ಮತಗಳ ಅಂತರ ತೊಡೆದು ಹಾಕಿದ್ದಾರೆ ಎಂದರು. ಶಿಕಾರಿಪುರ ತಾಲೂಕು ಹೊಸೂರಿನ ಪಶು ವೈದ್ಯ ಡಾ. ಕೆ.ಎಂ.ಸುನೀಲ್ ಕುಮಾರ್ ಇತರರಿದ್ದರು.