‘ಯೋಗ’ ಶಬ್ದವು ‘ಕೂಡು’ ‘ಬೆರೆ’ ಎಂಬರ್ಥದ ‘ಯುಜ್’ ಧಾತುವಿನಿಂದ ಬಂದಿದೆ. ಹಾಗಾದರೆ ಯಾರು ಯಾರನ್ನು ಕೂಡುವುದು? ಜೀವ-ಶಿವರ ಐಕ್ಯವೇ ಯೋಗ. ಆತ್ಮ ಪರಮಾತ್ಮನಲ್ಲಿ ಕೂಡುವುದು. ಅಂಗ-ಲಿಂಗದ ಸಮರಸವೇ ಯೋಗ. ಹೀಗೆ ಜೀವನು ಭವವನ್ನು ಕಳಚಿ ಶಿವನಾಗಲು ಹಲವಾರು ಯೋಗಗಳಿವೆ. ಮಾರ್ಗಗಳು ಬೇರೆ ಬೇರೆಯಾದರೂ ಗುರಿ ಒಂದೇ. ಯೋಗಗಳು ಹಲವಾರು ಆದರೂ ಅವೆಲ್ಲವುಗಳ ಗುರಿ ಸಾಕ್ಷಾತ್ಕಾರ ಅಥವಾ ಮುಕ್ತಿಯೇ ಆಗಿದೆ.
ಯೋಗಗಳಲ್ಲಿ ಜ್ಞಾನಯೋಗ, ರಾಜಯೋಗ, ಕರ್ಮಯೋಗ, ಭಕ್ತಿಯೋಗ, ಹಠಯೋಗ, ಶಿವಯೋಗ ಇತ್ಯಾದಿಗಳಿವೆ. ಒಬ್ಬ ಬಂದು ಮಹಾತ್ಮರಿಗೆ ಹೇಳಿದ; ‘ನೋಡಿ, ನಾನು ನೀರಿನ ಮೇಲೆ ನಡೆಯುತ್ತೇನೆ. ಮೂವತ್ತು ವರ್ಷ ಸಾಧನೆ ಮಾಡಿದೆ’ ಎಂದನಂತೆ. ಮಹಾತ್ಮರು ಹೇಳಿದರಂತೆ, ‘ಇದ್ಯಾವ ದೊಡ್ಡ ಸಾಧನೆ? ದೋಣಿಯವನಿಗೆ ಒಂದು ರೂಪಾಯಿ ಕೊಟ್ಟಿದ್ದರೆ ಹೊಳೆಯನ್ನು ದಾಟಿಸುತ್ತಿದ್ದ.’ ಮತ್ತೊಬ್ಬ ಬಂದು, ‘ನಾನು ಆಕಾಶಮಾರ್ಗದಲ್ಲಿ ಹಕ್ಕಿಯಂತೆ ಹಾರಾಡುತ್ತೇನೆ’ ಎಂದು ತೋರಿಸಿದ. ಆಗ ಮಹಾತ್ಮರು, ‘ಇದೇನೂ ದೊಡ್ಡದಲ್ಲ, ಕಾಗೆ-ಹದ್ದುಗಳು ಕೂಡ ಹಾರುತ್ತವೆ’ ಎಂದರಂತೆ. ಇವೆಲ್ಲ ಯೋಗಗಳಲ್ಲ, ಜೀವನವನ್ನು ವ್ಯರ್ಥ ಹಾಳು ಮಾಡಿಕೊಳ್ಳುವ ಮಾರ್ಗ ಎಂದರು ಅವರು. ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಅಂಗಗಳು ಇರುವವು. ಹಿಂದಿನ ನಮ್ಮ ಪೂರ್ವಜ ಗುರುಗಳು, ಯೋಗದ ಮಾರ್ಗವನ್ನು ಕಂಡುಹಿಡಿದು ಅದು ಎಲ್ಲರಿಗೂ ಸಾಧ್ಯವಾಗುವಂತೆ ತಮ್ಮ ಸ್ವಾನುಭವದಿಂದ ಶಿವಯೋಗ ಎಂದು ಕರೆದರು. ಶಿವಯೋಗವನ್ನು ತಿಳಿದವರೇ ಶಿವಯೋಗಿಗಳು. ಲಿಂಗಾಂಗ ಸಾಮರಸ್ಯದ ಅತ್ಯುನ್ನತ ಸ್ಥಿತಿಯನ್ನು ಸಾಮಾನ್ಯರಿಗೆ ಸಾಧಿಸಲು ಸಾಧ್ಯವಿಲ್ಲ. ಅಂತಹ ಮನೋನಿಗ್ರಹ, ಉತ್ಕಟೇಚ್ಛೆ, ನಿರಂತರ ಸಾಧನೆ ಇದ್ದವರಿಗೆ ಮಾತ್ರ ಇದು ಸಾಧ್ಯ.
ಇಂತಹ ಆತ್ಮದುನ್ನತಿ ಶಿವಯೋಗದಿಂದ ಸಾಧಿಸಲು ಸಾಧ್ಯವಾಗಲಿ ಎಂಬ ಸದುದ್ದೇಶದಿಂದ ಹಾನಗಲ್ಲ ಗುರು ಶ್ರೀ ಕುಮಾರ ಶಿವಯೋಗಿಗಳು ಶಿವಯೋಗ ಮಂದಿರವನ್ನು ಸ್ಥಾಪಿಸಿದರು.