ನ್ಯೂಸ್

ನಿವೇಶನ ವಾಪಸ್, ರಾಜಕೀಯ ನಾಟಕ: ವಿಜಯೇಂದ್ರ ಲೇವಡಿ

ಬೆಂಗಳೂರು: ಕಾನೂನು ಕುಣಿಕೆ ಬಿಗಿಯಾಗುತ್ತಲೇ ಪರಿಹಾರ ರೂಪದಲ್ಲಿ ಹಂಚಿಕೆಯಾಗಿದ್ದ ಬದಲೀ ನಿವೇಶನಗಳನ್ನು ಮುಡಾಗೆ ವಾಪಸ್ ನಿರ್ಧಾರ ರಾಜಕೀಯ ನಾಟಕ, ಕಾನೂನು ಕುಣಿಕೆಯಿಂದ ಪಾರಾಗಲು, ರಾಜಕೀಯ ಅನುಕಂಪ ಗಿಟ್ಟಿಸಿಕೊಳ್ಳುವ, ತೊಡೆ ತಟ್ಟುತ್ತಿರುವ ಸ್ವಪಕ್ಷದವರ ವಿರುದ್ದ ಹೂಡಿದ ಪ್ರತಿತಂತ್ರ, ರಾಜಕೀಯ ನಾಟಕವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಟುಗಳನ್ನು ವಾಪಸ್ ಮಾಡುವ ಮೂಲಕ ತಪ್ಪು ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಬರೆದರೋ, ಮುಖ್ಯಮಂತ್ರಿಯೇ ಬರೆದರೋ ಗೊತ್ತಿಲ್ಲ. ಆದರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಸೃಷ್ಡಿಯಾಗಿದೆ ಎಂದರು.

ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯಪಾಲರ ಮೇಲೆ ಆರೋಪ ಹೊರಿಸಿದರು. ಕೇಂದ್ರ ಸರ್ಕಾರದ ಕೈಗೊಂಬೆ, ರಾಜಕೀಯ ಪ್ರೇರಿತವೆಂದು ಸಿಎಂ, ಸಚಿವರು, ಕಾಂಗ್ರೆಸ್ ನಾಯಕರು ದೂರಿದರು. ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ರಾಜ್ಯಪಾಲರಲ್ಲಿ ಕ್ಷಮೆ ಯಾಚಿಸಬೇಕು ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.

ವಿಡಿಯೋ ತಿರುಗು ಬಾಣ

ಯಡಿಯೂರಪ್ಪ ಸಿಎಂ ಆಗಿದ್ದ ಅವಧಿ (2011)ಯಲ್ಲಿ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಡಿದ ಮಾತಿನ ವಿಡಿಯೋ ತುಣುಕನ್ನು ಇದೇ ಸಂದರ್ಭದಲ್ಲಿ ವಿಜಯೇಂದ್ರ ಬಿಡುಗಡೆ ಮಾಡಿ, ಸಿದ್ದರಾಮಯ್ಯ ಅವರ ಮಾತುಗಳನ್ನು ಅವರಿಗೆ ತಿರುಗುಬಾಣವಾಗಿಸಿದರು.

ಸೈಟ್ ವಾಪಸ್ ಕೊಟ್ಟಿದ್ದಾರೆಂದರೆ ತಪ್ಪು ಮಾಡಿದ್ದಾರೆ ಎಂದು ಅರ್ಥ ತಾನೆ ? ಸೈಟ್ ಹಿಂತಿರುಗಿಸಿ,ಮಾಡಿದ ತಪ್ಪು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಒತ್ತಾಯ ಮಾಡಿರುವುದು ಈ ವಿಡಿಯೋ ತುಣುಕಿನಲ್ಲಿದೆ.

ಮುಡಾ ನಿವೇಶನಗಳ ಹಂಚಿಕೆ ಪ್ರಕರಣದಲ್ಲೂ ತಪ್ಪೇ ಮಾಡಿಲ್ಲ. ನನ್ನ ಕುಟುಂಬಕ್ಕೆ ಕಾನೂನುಬದ್ಧವಾಗಿ ದೊರೆತ ನಿವೇಶನ ಏಕೆ ವಾಪಸ್ ಮಾಡಬೇಕು ?. ಮುಡಾ ನಮ್ಮ ಜಮೀನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಅದರ ಬೆಲೆ 62 ಕೋಟಿ ರೂ.ಗಳಾಗುತ್ತದೆ. ಕೊಡುತ್ತಾರಾ ? ಎಂದು ಕೇಳಿದ್ದ ಸಿದ್ದರಾಮಯ್ಯ ಈಗ ನಿವೇಶನ ವಾಪಸ್ ಮಾಡಿದ್ದಾರೆ‌.

ಈ ಹಿಂದೆ ಅವರೇ ಹೇಳಿದಂತೆ ತಪ್ಪು ಒಪ್ಪಿಕೊಂಡಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕಾಗುತ್ತದೆ. ಅವರ ರಾಜೀನಾಮೆ ನಮಗಿಂತ ಕಾಂಗ್ರೆಸ್ ನವರಲ್ಲೇ ವಿಶ್ವಾಸ ಹೆಚ್ಚಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಪರಮೇಶ್ವರ್ ನಡುವೆ ಗೌಪ್ಯ ಚರ್ಚೆ, ಸಿಎಂ ಆಪ್ತ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಸುಳಿವು ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವುದನ್ನೇ ಸಾರುತ್ತಿವೆ ಎಂದು ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.