ಹುಣಸೂರು ತಾಲೂಕು ತೆಕ್ಕಲ ಹಾಡಿಯಲ್ಲಿ ಕಂದಾಯ ಇಲಾಖೆ ವತಿಯಿಂದ ನಿವೇಶನದ ಕ್ರಯಪತ್ರಗಳ ನೋಂದಣಿ ಕಾರ್ಯಕ್ಕೆ ತಸೀಲ್ದಾರ್ ಜೆ.ಮಂಜುನಾಥ್ ಚಾಲನೆ ನೀಡಿದರು. ಮುಖಂಡರಾದ ಡಾ.ಎಸ್.ಶ್ರೀಕಾಂತ್, ಜಯಪ್ಪ, ಮಹದೇವಮ್ಮ, ಕೆಂಪಮ್ಮ ಇತರರಿದ್ದರು. 
ನ್ಯೂಸ್

ನಿವೇಶನಗಳ ನೋಂದಣಿ ಕಾರ್ಯಕ್ಕೆ ಚಾಲನೆ

ಹುಣಸೂರು: ತಾಲೂಕಿನ ತೆಕ್ಕಲಹಾಡಿಯ ಆದಿವಾಸಿಗಳ ಮನೆ, ನಿವೇಶನಗಳ ನೋಂದಣಿ ಕಾರ್ಯಕ್ಕೆ ತಹಸೀಲ್ದಾರ್ ಜೆ.ಮಂಜುನಾಥ್ ಭಾನುವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಹಿಂದೆ ತೀರ್ಮಾನಿಸಿದ್ದಂತೆ ತೆಕ್ಕಲಹಾಡಿಯನ್ನು ಕಂದಾಯ ಗ್ರಾಮವಾಗಿ ಘೋಷಿಸಲಾಗಿತ್ತು. ಅದರಂತೆ ಕಂದಾಯ ಇಲಾಖೆ ಸುಪರ್ದಿಯಲ್ಲಿರುವ ನಿವೇಶನಗಳನ್ನು ಮಾಲೀಕರ ಹೆಸರಿಗೆ ಕ್ರಪತ್ರ ಮಾಡಿಕೊಡುವ ಕಾರ್ಯ ಆರಂಭಿಸಲಾಗಿದೆ. ಹಕ್ಕುಪತ್ರ ಹೊಂದಿರುವ ಫಲಾನುಭವಿಗಳಿಗೆ ನೋಂದಾಯಿತ ಕ್ರಯಪತ್ರವನ್ನು ಒದಗಿಸಿ ತನ್ಮೂಲಕ ಖಾತೆ ಮಾಡಿಕೊಡಲು ನಿರ್ಧರಿಸಲಾಗಿದೆ. ಮುಂದಿನ 20 ದಿನಗಳೊಳಗೆ ಈ ಕಾರ್ಯ ಸಂಪನ್ನಗೊಳ್ಳಲಿದ್ದು ಫಲಾನುಭವಿಗಳ ಮನೆ ಬಾಗಿಲಿಗೆ ಖಾತೆ ಪತ್ರಗಳನ್ನು ನೀಡಲಾಗುವುದೆಂದು ತಿಳಿಸಿದರು.

ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ತೆಕ್ಕಲ ಹಾಡಿಯಲ್ಲಿ 60ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿದ್ದು ಈ ಪೈಕಿ 25 ಕುಟುಂಬಳು ಈ ಹಿಂದೆಯೇ ನಿವೇಶನ ಮಾಲೀಕತ್ವಕ್ಕಾಗಿ ಸರ್ಕಾರಿ ಶುಲ್ಕವನ್ನು ಭರಿಸಿದ್ದರು. ಈ ಪೈಕಿ ಇದೀಗ 17 ಜನರಿಗೆ ಖಾತೆ ಮಾಡಿಕೊಡುವ ಪ್ರಕ್ರಿಯೆ ನಡೆದಿದೆ. ಮುಂದಿನ ದಿನಗಳಲ್ಲಿ ಹಾಡಿಯ ಎಲ್ಲ ನಿವಾಸಿಗಳಿಗೂ ಅನುಕೂಲವಾಗುವಂತೆ ತಾಲೂಕು ಆಡಳಿತ ಕ್ರಮವಹಿಸಬೇಕೆಂದು ಕೋರಿದರು. ಈ ವೇಳೆ ಕಂದಾಯ ಇಲಾಖೆ ಸಿಬ್ಬಂದಿ, ಆದಿವಾಸಿ ಮುಖಂಡರಾದ ಜಯಪ್ಪ, ಶಿವಣ್ಣ, ಕೆಂಪಯ್ಯ, ಮಹದೇವಮ್ಮ, ಕೆಂಪಮ್ಮ ಮತ್ತಿತರರು ಇದ್ದರು.