ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಮಾಜಿ ಸೈನಿಕರಿಗೆ ಶೀಘ್ರದಲ್ಲೇ ನಿವೇಶನ ಮಂಜೂರು ಮಾಡಲಾಗುವುದು ಎಂದು ಮುಡಾ ಅಧ್ಯಕ್ಷ ಕೆ.ಮರಿಗೌಡ ಭರವಸೆ ನೀಡಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆ ಆವರಣದಲ್ಲಿ ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಪ್ರಾಣವನ್ನು ಲೆಕ್ಕಿಸದೆ ಯುದ್ಧಭೂಮಿಯಲ್ಲಿ ಹೋರಾಡಿದ ಯೋಧರು ಹಾಗೂ ವೀರಮರಣ ಹೊಂದಿದ ಯೋಧರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು.
ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನದಲ್ಲಿ ನಿರ್ಮಾಣವಾಗುತ್ತಿರುವ ಯುದ್ಧ ಸ್ಮಾರಕಕ್ಕೆ ಸಹಕಾರ ನೀಡುವಂತೆ ಈ ಸಂದರ್ಭ ನಿವೃತ್ತ ಯೋಧರ ಮನವಿಗೆ ಸ್ಪಂದಿಸಿದ ಮರಿಗೌಡ, ಯುದ್ಧ ಸ್ಮಾರಕ ನಿರ್ಮಾಣಕ್ಕೆ ಮುಡಾದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಪಿ.ಕೆ.ಬಿದ್ದಪ್ಪ, ಉಪಾಧ್ಯಕ್ಷ ನರಸೇಗೌಡ, ಪದಾಧಿಕಾರಿಗಳಾದ ಎಸ್.ಆರ್. ರವಿಕುಮಾರ್, ಎಚ್.ಎಸ್. ಸುರೇಶ್, ಬಿ.ಎಂ.ಗೋಪಾಲ್ ಹಾಗೂ ಇತರರು ಇದ್ದರು.