ನ್ಯೂಸ್

ಸೀತಾಧ್ಯಾನ ಭಾವನಾತ್ಮಕ ಸ್ಥೈರ್ಯ-ಸಂಸ್ಕಾರಕ್ಕೆ ರಾಮನಾಮ

‘ರಾಮಮಂತ್ರವ ಜಪಿಸೋ ಹೇ ಮನುಜ’ ಇದು ಕೇವಲ ದಾಸವಾಣಿಯಲ್ಲ, ಮನೋಸ್ಥೈರ್ಯ, ಭಾವನಾತ್ಮಕ ಸಂಸ್ಕಾರಕ್ಕೆ ಮೂಲಮಂತ್ರ. ಶಿವನು ಪಾರ್ವತಿಗೆ ಹೇಳಿದ ದಿವ್ಯಮಂತ್ರ. ವಾಲ್ಮೀಕ ಎಂಬ ಬೇಡನನ್ನು ಮಹರ್ಷಿ ಮಾಡಿದ ಮಂತ್ರ. ಭರತವರ್ಷವನ್ನು ಒಂದುಗೂಡಿಸಿದ ಮಂತ್ರ. ಸನಾತನಿಗಳ ಜೀವಾಳ ಸ್ಪೂರ್ತಿ ಜೀವನೋದ್ಧಾರ ಮಂತ್ರ. ಇದೇ ರಾಮಮಂತ್ರ ಸೀತಾಮಾತೆಯನ್ನು ಕಷ್ಟ-ಸಂಕಷ್ಟದ ಶೃಂಖಲೆಯಿಂದ ಕಾಪಾಡಿತು. ವಿಶೇಷವಾಗಿ ರಾಕ್ಷಸ ರಾಜ ರಾವಣನಿಂದ ಅಪಹರಿಸಲ್ಪಟ್ಟು ಲಂಕೆಯ ಅಶೋಕವನದಲ್ಲಿ ಬಂಧಿತಳಾಗಿದ್ದಾಗ, ಅವಳ ಅಸಾಮಾನ್ಯ ಅಂತಃಶಕ್ತಿಯನ್ನು ಮತ್ತು ಸಮಾಧಾನ -ಧೈರ್ಯ ತುಂಬಿದ ಮಂತ್ರ ಧ್ಯಾನವೇ ರಾಮನಾಮ.

ಅಶೋಕವನದಲ್ಲಿ ಬಂಧಿತ ಸ್ಥಿತಿ: ದಶಮುಖರಾವಣನು ಭೀಕರ ಸ್ವಭಾವ- ಪ್ರಭಾವ- ಭಯೋತ್ಪಾದನೆಗೆ ಕುಖ್ಯಾತ.ಅವನ ಸುಪರ್ದಿಯ ಅಶೋಕವನದಲ್ಲಿ ರಾಕ್ಷಸರು ಮತ್ತು ರಾಕ್ಷಸಿಯರಿಂದ ಕಾಡಲ್ಪಡುತ್ತಾಳೆ. ಸೀತೆಯನ್ನು ತನ್ನೊಂದಿಗೆ ವಿವಾಹವಾಗಲು ಬಲಾ ತ್ಕಾರ, ಪ್ರಭಾವ- ಪ್ರಲೋಭನೆಗಳ ಮೂಲಕ ಮನಗೆಲ್ಲಲು ಪ್ರಯತ್ನಿಸುತ್ತಾನೆ. ಆಕೆಗೆ ಸಂಪತ್ತು ಮತ್ತುಅಧಿಕಾರವನ್ನು ನೀಡುವ ವಾಗ್ದಾನ ನೀಡುತ್ತಾನೆ.ಇಂತಹ ಭಯಾನಕ ಅಸಹ್ಯ ವಾತಾವರಣ ದಲ್ಲಿಯೂ ಮಹಿಳೆ ಅಬಲೆಯಲ್ಲ ಸಬಲೆ ಎಂದು ಸಾರಲು ಸಹಕರಿಸಿದ ಸರಳ ಉಪಾಯ ಜಗತ್ತಿಗೆ ತೋರಿಸುತ್ತಾಳೆ.

ರಾಮನ ಮೇಲೆ ನಂಬಿಕೆ-ಧರ್ಮದ ಅನುಸರಣೆ: ರಾಮನ ಮೇಲಿನ ಸೀತಾಮಾತೆಯ ಅಚಂಚಲ ನಂಬಿಕೆ ಅವಳ ಮಾನಸಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಉಳಿಸುವಲ್ಲಿ ಮುಖ್ಯಪಾತ್ರ ವಹಿಸಿತು. ರಾಮ ಅವಳನ್ನು ರಕ್ಷಿಸಲು ಬರುವನು ಎಂಬ ನಂಬಿಕೆ ಅವಳಿಗೆ ಆಸೆ ಮತ್ತುಧೈರ್ಯ ನೀಡಿತು. ಮರ್ಯಾದಾ ಪುರುಷೋತ್ತಮನ ಸತಿ ಸೀತಾಮಾತೆತನ್ನ ಆದರ್ಶತತ್ವವನ್ನು ಧರ್ಮವನ್ನು ಕಟ್ಟುನಿಟ್ಟಾಗಿ ನಿಷ್ಠೆಯಿಂದ ಅನುಕರಿಸುತ್ತಾಳೆ. ಅವಳು ರಾವಣನ ಸಕಲ ಪ್ರಸ್ತಾವ, ಆಸೆ-ಆಮಿಷ

ಗಳನ್ನು ತಿರಸ್ಕರಿಸುತ್ತಾಳೆ ಮತ್ತು ರಾಮನಿಗೆ ನಂಬಿಕೆ ವಹಿಸುತ್ತಾಳೆ.ರಾಮನಾಮ ಜಪ: ‘ಶ್ರೀರಾಮ’ ನಾಮದ ನಿರಂತರ ಜಪವು ಸೀತಾಮಾತೆಗೆ ಆಧ್ಯಾತ್ಮಿಕ, ಮಾನಸಿಕ ಮತ್ತು ನೈತಿಕ ಶಕ್ತಿಯನ್ನು ನೀಡಿತು. ಈ ತಾರಕ ಮಂತ್ರಜಪ ಅವಳಿಗೆ ಮನಕೇಂದ್ರೀಕರಿಸಲು ಮತ್ತು ರಾಮ ನೊಂದಿಗೆ ಸಂಪರ್ಕ ಕಾಯು ವುದಕ್ಕೆ ಸಹಾಯ ಮಾಡಿತು. ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ ತಾರಕ ಮಂತ್ರದ ದೈವೀಕನಾಮದ ನಿರಂತರ ಪುನಾರವೃತ್ತಿ ಮನಸ್ಸನ್ನು ನಿರಾಶೆಯಿಂದ ಮತ್ತು ಭಯದಿಂದ ರಕ್ಷಿಸಲು ಸಹಾಯ ಮಾಡಿತು.

ಆಧ್ಯಾತ್ಮಿಕ ಅಭ್ಯಾಸ-ಆಂತರಿಕ ಶಕ್ತಿ: ಸೀತಾಮಾತೆ ಸಹಾಧ್ಯಾನ ಮತ್ತು ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡು ಆಂತರಿಕ ಶಕ್ತಿಯನ್ನು ಉದ್ದೀಪಿಸಿ ಕಾಯ್ದುಕೊಳ್ಳುತ್ತಾಳೆ. ಅವಳ ಸಾತ್ವಿಕ ಅಭ್ಯಾಸಗಳು, ಅಪಾರ ಅಂತಃಶಕ್ತಿ ಮತ್ತು ಸ್ಥೈರ್ಯವನ್ನು ತೋರುತ್ತಾಳೆ. ಅವಳು ಭಯ-ನಿರಾಶೆಗೆ ಒಳಗಾಗುವುದಿಲ್ಲ. ಬದಲಿಗೆ ಭಾರತೀಯ ನಾರಿಯ ಸನಾತನ ಮೌಲ್ಯಗಳು ಮತ್ತು ಗೌರವವನ್ನು ಕಾಯುವುದಕ್ಕೆ ಸಂಕಲ್ಪವನ್ನು ತೋರುತ್ತಾಳೆ.

ಪ್ರಕೃತಿಯ ಬಳಕೆ: ಭೂಮಿತಾಯಿಯ ಗರ್ಭಸಂಜಾತೆ ಸೀತೆ ಲಂಕೆಯ ಅಶೋಕವನದ ಸಹಜ ಪರಿಸರದಿಂದ ಶಕ್ತಿ ಮತ್ತು ಸಮಾಧಾನವನ್ನು ಪಡೆದುಕೊಳ್ಳುತ್ತಾಳೆ. ಮರಗಳು, ಹಕ್ಕಿಗಳು ಮತ್ತು ಶಾಂತ ಪರಿಸರವು ಅವಳಿಗೆ ಶಾಂತಿ ಮತ್ತು ದೈವದೊಂದಿಗೆ ಸಂಪರ್ಕವನ್ನು ನೀಡುತ್ತದೆ. ಇವು ಸೀತೆಯ ಅಸಾಮಾನ್ಯ ವ್ಯಕ್ತಿತ್ವ ಮತ್ತು ಗುಣಗಳನ್ನು ತೋರಿಸುತ್ತದೆ. ಕಠಿಣ ಸವಾಲುಗಳನ್ನು ದೈವೀಕೃಪೆ ಮತ್ತು ಸ್ಥೈರ್ಯದಿಂದ ಎದುರಿಸುತ್ತಾಳೆ. ಶಕ್ತಿ ಮತ್ತು ಪಾವಿತ್ರ್ಯದ ಸಂಕೇತವಾಗುತ್ತಾಳೆ.

ರಾಮನಾಮದ ಮಹಿಮೆ ಮತ್ತು ವೈಜ್ಞಾನಿಕ ಮಹತ್ವ: ‘ರಾಮ’ ಎಂಬ ಶಬ್ದವು ತನ್ನಲ್ಲಿ ಅಪಾರ ಶಕ್ತಿಯನ್ನು ಹೊಂದಿದೆ. ರಾಮನಾಮ ಜಪವು ಭಕ್ತನಿಗೆ ದೈವದೊಂದಿಗೆ ಸಂಪರ್ಕ ಹೊಂದಲು ಅತ್ಯುತ್ತಮ ಮಾರ್ಗವಾಗಿದೆ. ಭಕ್ತಿ-ಶ್ರದ್ಧೆಯಿಂದ ಜಪಿಸಿದಾಗ ಇದು ಆಧ್ಯಾತ್ಮಿಕ ಪ್ರಗತಿಯನ್ನು ತ್ವರಿತಗೊಳಿಸುತ್ತದೆ. ‘ರಾಮ’ ಎಂಬ ಶಬ್ಧದ ಧ್ವನಿತರಂಗಗಳು ವಿಶ್ವದ ಶ್ರೇಷ್ಠ ಶಬ್ಧ ಶಕ್ತಿಗಳಲ್ಲಿ ಒಂದೆಂದು ಸಾದರಪಡಿಸಲಾಗಿದೆ. ರಾಮನಾಮದ ಜಪವು ಭಕ್ತನಿಗೆ ದಾರ್ಶನಿಕ ಮತ್ತು ಮಾನಸಿಕ ಶಕ್ತಿಯನ್ನು ನೀಡುತ್ತದೆ.

ಸೀತಾಮಾತೆಯ ಅನುಭವವು ಆಕೆಯ ಸ್ಥೈರ್ಯ, ಆಧ್ಯಾತ್ಮಿಕ ಶಕ್ತಿ, ರಾಮನ ಮೇಲಿನ ಅಚಲ ನಂಬಿಕೆ, ಧರ್ಮದ ಅನುಕರಣೆ ರಾಮನಾಮ ಜಪದ ಮಹತ್ವವನ್ನು ಪ್ರಕಟಿಸುತ್ತದೆ. ಕ್ಲಿಷ್ಟಕರ ಸಂದರ್ಭ ಹಾಗೂ ಅವಳ ಬಂಧನವನ್ನು ಅಸಾಧಾರಣ ಸಮಾಧಾನ ದಿಂದ ಎದುರಿಸುತ್ತಾಳೆ. ಸಂಕಟವನ್ನು ಸಮಾಧಾನ ಮತ್ತು ಧರ್ಮದ ಮೂಲಕ ಎದುರಿಸಲು ಒಂದು ಮಾದರಿಯಾಗುತ್ತಾಳೆ. ಅವಳ ‘ಶ್ರೀರಾಮ’ ನಾಮದ ನಿರಂತರ ಜಪವು ಸಕಲರಿಗೆ ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಸ್ಥಿರತೆಯನ್ನು ನೀಡುತ್ತದೆ.

(ಪ್ರತಿಕ್ರಿಯಿಸಿ: vvsudina@gmail.com)