ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಪೆನ್ ಡ್ರೈವ್ ಅನ್ನು ಹಂಚಿಕೆ ಮಾಡಿದ ಆರೋಪ ಎದುರಿಸುತ್ತಿರುವ ಮತ್ತು ಪೆನ್ ಡ್ರೈವ್ ಪ್ರಕರಣದ ಮಹಾನಾಯಕ ಶಾಸಕ ಎ.ಮಂಜು ಎಂದು ಪೋಸ್ಟ್ ಮಾಡಿದ್ದ ಆರೋಪಿ ನವೀನ್‌ಗೌಡನಿಗಾಗಿ ಎಸ್‌ಐಟಿ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ.
ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಸಂಬಂಧ ಪ್ರಜ್ವಲ್‌ರ ಮಾಜಿ ಕಾರು ಚಾಲಕ ಕಾರ್ತಿಕ್‌ಗೌಡ, ಪುಟ್ಟರಾಜು, ನವೀನ್‌ಗೌಡ ಎಂಬುವರ ವಿರುದ್ಧ ಹಾಸನದ ಸೈಬರ್ ಪೊಲೀಸ್ ಠಾಣೆಯಲ್ಲಿ ಏ.೨೩ರಂದು ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಎಸ್‌ಐಟಿಗೆ ವರ್ಗಾಯಿಸಲಾಗಿತ್ತು. ನ್ಯಾಯಾಲಯ ಕಾರ್ತಿಕ್‌ಗೌಡ, ಪುಟ್ಟರಾಜು ಮತ್ತು ನವೀನ್‌ಗೌಡರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಆರೋಪಿ ನವೀನ್‌ಗೌಡನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.
ಎಸ್‌ಐಟಿಗೆ ಎ.ಮಂಜು ದೂರು:
ಆರೋಪಿ ನವೀನ್‌ಗೌಡ ವಿರುದ್ಧ ಎಸ್‌ಐಟಿಗೆ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜು ಸೋಮವಾರ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.
ಆರೋಪಿ ನವೀನ್‌ಗೌಡ ತನ್ನ ೇಸ್‌ಬುಕ್ ಖಾತೆಯಲ್ಲಿ, ಏ.೨೦ ರಂದು ರಸ್ತೆಯಲ್ಲಿ ಸಿಕ್ಕಿದ್ದ ಪೆನ್‌ಡ್ರೈವ್ ಅನ್ನು ಏ.೨೧ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ಶಾಸಕ ಎ.ಮಂಜು ಅವರಿಗೆ ಕೊಟ್ಟಿದ್ದೆ. ಕುಮಾರಸ್ವಾಮಿ ಅವರು ಹೇಳಿದಂತೆ ಅಶ್ಲೀಲ ವಿಡಿಯೋಗಳ ವೈರಲ್ ಹಿಂದೆ ಇರುವ ಮಹಾನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಭಾನುವಾರ ಪೋಸ್ಟ್ ಹಾಕಿದ್ದ. ಇದರಿಂದ ಆಕ್ರೋಶಗೊಂಡಿದ್ದ ಎ.ಮಂಜು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಎಸ್‌ಐಟಿಗೆ ದೂರು ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಆತನ ಬಗ್ಗೆ ಪರಿಚಯವೇ ಇಲ್ಲ. ಆತ ಎಸ್‌ಐಟಿ ತನಿಖೆ ದಿಕ್ಕು ತಪ್ಪಿಸುವುದಕ್ಕೆ ಈ ರೀತಿ ಮಾಡಿರಬಹುದು. ಇದರ ಹಿಂದೆ ರಾಜಕೀಯ ಷಡ್ಯಂತರ ಇದೆ. ನಾನು ಇದರಲ್ಲಿ ಪಾಲುದಾರನಲ್ಲ ಎಂಬುದು ಸಾಬೀತು ಆಗಬೇಕು. ಹೀಗಾಗಿ ಎಸ್‌ಐಟಿಗೆ ದೂರು ನೀಡಿದ್ದೇನೆ. ನವೀನ್‌ಗೌಡನನ್ನು ಬಂಧಿಸಿ, ನಿಜ ಏನು ಎಂಬುದನ್ನು ರಾಜ್ಯದ ಜನತೆ ಮುಂದಿಡಬೇಕು ಎಂದು ಒತ್ತಾಯಿಸಿದರು.
ಸತೀಶ್ ಬಾಬು ೪ ದಿನ ಎಸ್‌ಐಟಿ ವಶಕ್ಕೆ:
ಪೆನ್‌ಡ್ರೈವ್‌ನಲ್ಲಿರುವ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಸತೀಶ್ ಬಾಬುವನ್ನು ನ್ಯಾಯಾಲಯ ೪ ದಿನ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ.
ನಗರದ ೪೨ ನೇ ಎಸಿಎಂಎಂ ಕೋರ್ಟ್ ಆರೋಪಿ ಸತೀಶ್‌ಬಾಬುವನ್ನು ೪ ದಿನ ಎಸ್‌ಐಟಿ ಕಸ್ಟಡಿಗೆ ನೀಡಿದೆ. ಸಂತ್ರಸ್ತ ಮಹಿಳೆಯನ್ನು ಶಾಸಕ ರೇವಣ್ಣ ಮತ್ತು ಭವಾನಿ ಅಕ್ಕ ಹೇಳಿದ್ದಾರೆ ಎಂದು ಮಹಿಳೆಯನ್ನು ಆಕೆಯ ಮನೆಯಿಂದ ಕರೆದೊಯ್ದು ಕೆ.ಆರ್.ನಗರ ತಾಲೂಕಿನ ಹನಗೋಡು ಹೋಬಳಿಯ ಕಾಳೇನಹಳ್ಳಿರುವ ತನ್ನ ಪರಿಚಿತರ ತೋಟದ ಮನೆಯಲ್ಲಿ ಆರೋಪಿ ಸತೀಶ್‌ಬಾಬು ಇರಿಸಿದ್ದ. ಈ ಸಂಬಂಧ ಮಹಿಳೆಯ ಪುತ್ರ ಅಪಹರಣದ ದೂರು ನೀಡಿದ್ದ. ದೂರಿನನ್ವಯ ಸತೀಶ್‌ಬಾಬುನನ್ನು ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಶಾಸಕ ರೇವಣ್ಣ ಕೂಡ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದರು.
ಪಾಸ್‌ಪೋರ್ಟ್ ರದ್ದುಪಡಿಸಲು ಸಿದ್ದತೆ:
ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬರುತ್ತಿದಂತೆ ಬಂಧನ ಭೀತಿಯಿಂದ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಅವರು ಡಿಪ್ಲಮೇಟಿಕ್ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ತೆರಳಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಡಿಪ್ಲಮೇಟಿಕ್ ಪಾಸ್‌ಪೋರ್ಟ್ ರದ್ದುಪಡಿಸುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ನಂತರ ಲುಕ್‌ಔಟ್ ಜಾರಿಗೊಳಿಸಿತ್ತು. ಅದಾದ ನಂತರ ಎಸ್‌ಐಟಿ ಬ್ಲೂೃ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಇದು ಯಾವುದಕ್ಕೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಇದೀಗ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ಅವರ ಡಿಪ್ಲಮೇಟಿಕ್ ಪಾಸ್‌ಪೋರ್ಟ್ ರದ್ದುಪಡಿಸಲು ಕೋರ್ಟ್ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಎಸ್‌ಐಟಿ ಚಿಂತನೆ ನಡೆಸಿದೆ. ಈ ಸಂಬಂಧ ಎಸ್‌ಐಟಿ ಅಧಿಕಾರಿಗಳು ಸಭೆ ಕೂಡ ನಡೆಸಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಜೈಲಿಗೆ ಭೇಟಿ ನೀಡಿದ ಜಿ.ಟಿ.ದೇವೇಗೌಡ
ಮಾಜಿ ಸಚಿವ ಮತ್ತು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೋಮವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ, ಪಕ್ಷದ ಶಾಸಕ ಎಚ್.ಡಿ. ರೇವಣ್ಣ ಅವರ ಆರೋಗ್ಯ ವಿಚಾರಿಸಿದರು. ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರೇವಣ್ಣ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈಗ ಆರಾಮಾಗಿದ್ದಾರೆ. ಜತೆಗೆ ಚಹ ಕುಡಿದೆವು. ಯಾವುದೇ ತಪ್ಪು ಮಾಡದೇ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಜೈಲಿಗೆ ಬರುವಂತಾಯಿತು ಎಂದು ೧೦ ನಿಮಿಷ ಕಣ್ಣೀರು ಸುರಿಸಿದರು. ದೇವರ ಮೇಲೆ ಅಪಾರ ಭಕ್ತಿ ಇಟ್ಟುಕೊಂಡಿದ್ದಾರೆ. ಅಂಥವರಿಗೆ ಇಂತಹ ಸ್ಥಿತಿ ಬಂದಿದ್ದರಿಂದ ನೊಂದಿದ್ದಾರೆ ಎಂದರು.