ನ್ಯೂಸ್

ತಾಂತ್ರಿಕ ನೆರವಿಗಾಗಿ ಆಪನ್ ಕಂಪನಿಯ ಮೊರೆ ಹೋದ ಎಸ್‌ಐಟಿ

ಮಂಜುನಾಥ.ಕೆ

ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಸಹಕರಿಸದಿರುವುದರಿಂದ ಎಸ್‌ಐಟಿ ಅಧಿಕಾರಿಗಳು ಪ್ರಕರಣ ಸಂಬಂಧ ತಾಂತ್ರಿಕ ನೆರವಿಗಾಗಿ ಆಪಲ್ ಐ-ೆನ್ ಕಂಪನಿಯ ಮೊರೆ ಹೋಗಿದ್ದಾರೆ.
ತಾನು ತಪ್ಪೇ ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತರ ಮಾಡಲಾಗಿದೆ ಎನ್ನುತ್ತಿರುವ ಪ್ರಜ್ವಲ್‌ರಿಂದ ಸತ್ಯ ಬಾಯಿ ಬಿಡಿಸಲು ಎಸ್‌ಐಟಿ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಪ್ರಕರಣದ ಪ್ರಮುಖ ಡಿಜಿಟಲ್ ಸಾಕ್ಷ್ಯ ಎಂದೇ ಪರಿಗಣಿಸಲಾಗಿರುವ ಮೊಬೈಲ್ ವರ್ಷದ ಹಿಂದೆಯೇ ಕಳೆದು ಹೋಗಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಪ್ರಜ್ವಲ್ ಬಳಸುತ್ತಿದ್ದ ಮೊಬೈಲ್ ಆಪಲ್ ಕಂಪನಿಯದು ಎಂದು ಗೊತ್ತಾಗಿದ್ದು, ಆ ಮೊಬೈಲ್‌ನ ಪತ್ತೆಗೆ ಮತ್ತು ಅದರಲ್ಲಿನ ದತ್ತಾಂಶ ಸಂಗ್ರಹಣೆಗೆ ಅಧಿಕಾರಿಗಳು ಆಪಲ್ ಕಂಪನಿಯ ತಾಂತ್ರಿಕ ನೆರವು ಕೋರಿದ್ದಾರೆ.
ಪ್ರಜ್ವಲ್, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ತಮ್ಮ ಮೊಬೈಲ್‌ನಲ್ಲಿ ಅದರ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು ಎಂಬ ಆರೋಪವಿದೆ. ಅಲ್ಲದೆ, ಆ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹೀಗಾಗಿ, ಲೈಂಗಿಕ ದೌರ್ಜನ್ಯದ ವಿಡಿಯೋಗಳಿರುವ ಆ ಮೊಬೈಲ್ ಪ್ರಕರಣಕ್ಕೆ ಪ್ರಮುಖ ತಾಂತ್ರಿಕ ಸಾಕ್ಷ್ಯವಾಗಿದೆ.
ಪ್ರಜ್ವಲ್, ಜರ್ಮನಿಯಿಂದ ಬೆಂಗಳೂರಿಗೆ ಮರಳಿದಾಗ ಎಸ್‌ಐಟಿ ಅಧಿಕಾರಿಗಳು ಅವರ ಬಳಿಯಿದ್ದ ಎರಡು ಟ್ರಾಲಿ ಬ್ಯಾಗ್‌ಗಳು, ಮೊಬೈಲ್ ಮತ್ತು ಹಣ ಜಪ್ತಿ ಮಾಡಿದ್ದರು. ಅಧಿಕಾರಿಗಳು ವಶಪಡಿಸಿಕೊಂಡ ಆಪಲ್ ಕಂಪನಿಯ ಆ ಮೊಬೈಲ್ ಹೊಸದಾಗಿದ್ದು, ಅದರಲ್ಲಿ ಪ್ರಜ್ವಲ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ಯಾವುದೇ ವಿಡಿಯೋಗಳಿಲ್ಲ. ಹೊಸ ಮೊಬೈಲ್‌ನಲ್ಲಿ ೨೦೨೪ರ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಚಿತ್ರ ಮತ್ತು ವಿಡಿಯೋಗಳು ಮಾತ್ರ ಲಭ್ಯವಾಗಿವೆ ಎನ್ನಲಾಗಿದೆ.

ಮೊಬೈಲ್ ಮುಚ್ಚಿಟ್ಟಿರುವ ಶಂಕೆ:
ವರ್ಷದ ಹಿಂದೆಯೇ ತಮ್ಮ ಮೊಬೈಲ್ ಕಳೆದು ಹೋಗಿದ್ದು, ಈ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ಸಹ ಕೊಟ್ಟಿದ್ದೇನೆ ಎಂದು ಪ್ರಜ್ವಲ್ ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ ಪ್ರಜ್ವಲ್, ಸಾಕ್ಷ್ಯ ನಾಶಕ್ಕಾಗಿ ಮೊಬೈಲ್ ಮುಚ್ಚಿಟ್ಟು ಸುಳ್ಳು ಹೇಳುತ್ತಿರುವ ಶಂಕೆಯಿದೆ. ಪ್ರಜ್ವಲ್‌ರ ಹಳೆಯ ಮೊಬೈಲ್ ಸಿಗುವುದು ತನಿಖೆಗೆ ಬಹಳ ಮುಖ್ಯವಾಗಿದೆ. ಹೀಗಾಗಿ, ಆ ಮೊಬೈಲ್‌ನ ಪತ್ತೆಗೆ ಮತ್ತು ಅದರಲ್ಲಿನ ದತ್ತಾಂಶ ಸಂಗ್ರಹಣೆಗೆ ಆಪಲ್ ಕಂಪನಿಯ ತಾಂತ್ರಿಕ ನೆರವು ಕೋರಲಾಗಿದೆ. ಪ್ರಜ್ವಲ್‌ರ ಹಳೆಯ ಮೊಬೈಲ್ ಬಗ್ಗೆ ಆಪಲ್ ಕಂಪನಿಯು ಮಾಹಿತಿ ಹಂಚಿಕೊಂಡರೆ ತನಿಖೆ ಚುರುಕಾಗಲಿದೆ ಎಂದು ಮೂಲಗಳು ತಿಳಿಸಿವೆ.