ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಂಥಾಲಯದ ಗೋಡೆ. ಮೇಲೆ ಮೊದಲು ಬರೆಸಿದ್ದ ವಿವಾದಾತ್ಮಕ ಬರಹ. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿವಾದಾತ್ಮಕ ಬರಹವನ್ನು ಅಳಸಿ ಹಾಕಿರುವುದು.  
ನ್ಯೂಸ್

ಭಾರತರತ್ನನ ತವರೂರಲ್ಲಿ ಆಕ್ರೋಶಕ್ಕೆ ಕಾರಣವಾದ 'ಮಂದಿರ ನಿರ್ಮಾಣದಿಂದ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ' ವಿವಾದಾತ್ಮಕ ಬರಹ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ತವರೂರಿನಲ್ಲಿನ ಡಿಜಿಟಲ್ ಗ್ರಂಥಾಲಯದ ಮೇಲಿನ ವಿವಾದಾತ್ಮಕ ಘೋಷ ವಾಕ್ಯ ಬರಹವು ಚರ್ಚೆಗೆಗ್ರಾಸವಾಗಿದ್ದು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ತಿದ್ದುಪಡಿ ಮೂಲಕ ಯಡವಟ್ಟು ಸರಿಪಡಿಸಿಕೊಂಡಿದ್ದಾರೆ.
ತಾಲೂಕಿನ ಮುದ್ದೇನಹಳ್ಳಿಯಲ್ಲಿ ಗ್ರಂಥಾಲಯವನ್ನು ಇತ್ತೀಚೆಗೆ ಮೇಲ್ದರ್ಜೆಗೇರಿಸಿ, ಹೊಸದಾಗಿ ಸುಣ್ಣ ಬಣ್ಣವನ್ನು ಬಳಿದಿದ್ದು ಇದೇ ವೇಳೆ ಧಾರ್ಮಿಕ ಸೂಕ್ಷö್ಮ ವಿಚಾರದಲ್ಲಿ ವಿವಾದವನ್ನು ಸೃಷ್ಟಿಸಲಾಗಿದೆ.
ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎಂಬ ಬರಹವನ್ನು ಮುಖ್ಯದ್ವಾರದ ಗೋಡೆಯ ಮೇಲೆ ಬರೆಸಲಾಗಿದೆ. ಇದರೊಂದಿಗೆ ಹಿಂದುಗಳು ಭಾವನೆಗಳನ್ನು ಕೆರಳಿಸಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಗ್ರಂಥಾಲಯ ಗೋಡೆಯ ಮೇಲೆ ಮಂದಿರ ನಿರ್ಮಾಣದಿಂದ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ ಎಂಬ ಬರಹವನ್ನು ಬರೆಸಿದ್ದು ಇದು ಹಿಂದು ವಿರೋಧಿ ಸರ್ಕಾರದ ಧೋರಣೆಗೆ ನಿದರ್ಶನ. ಏಕೆ ಮಸೀದಿಗಳನ್ನು ನಿರ್ಮಿಸಿದರೆ ಇಂತಹ ನಿಲುವನ್ನು ವ್ಯಕ್ತಪಡಿಸುವುದಿಲ್ಲ? ಎಂಬುದಾಗಿ ಹಿಂದು ಜನಜಾಗೃತಿ ಸಂಘಟನೆಯ ಮೋಹನಗೌಡ ಪ್ರಶ್ನಿಸಿದ್ದಾರೆ. ಜತೆಗೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ, ದೂರು ಸಲ್ಲಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

*ಬರಹ ಅಳಸಿದ ಅಧಿಕಾರಿಗಳು
ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದ್ದಂತೆ ವಿವಾದಾತ್ಮಕ ಬರಹವನ್ನು ಸಂಬಂಧಪಟ್ಟ ಗ್ರಂಥಾಲಯ ಸಿಬ್ಬಂದಿ ಅಳಸಿ ಹಾಕಿದ್ದಾರೆ. ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ ಎಂಬುದು ಕಾಣದಂತೆ ಬಣ್ಣ ಬಳಿಯಲಾಗಿದೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎನ್ನುವುದನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

*ವಿವಾದಾತ್ಮಕ ಬರಹಗಳು
ಅವಹೇಳನಕಾರಿ ಹೇಳಿಕೆ ನೀಡುವ ಮತ್ತು ವಿವಾದಾತ್ಮಕ ಬರಹಗಳನ್ನು ಬರೆಯುವ ಪ್ರಕರಣಗಳು ವ್ಯಾಪಕವಾಗಿ ವರದಿಯಾಗುತ್ತಿದ್ದು ಆಕ್ರೋಶಕ್ಕೆ ತುತ್ತಾದ ಬಳಿಕ ಸರಿಪಡಿಸುವಂತಹುದಾಗುತ್ತಿದೆ.
ಸರ್ಕಾರದಿಂದಲೇ ವಸತಿ ನಿಲಯಗಳ ಮೇಲಿನ ಜ್ಞಾನ ದೇಗುಲವಿದು, ಕೈ ಮುಗಿದು ಬಾ ಎಂಬ ಬರಹವನ್ನು ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸು ಎಂಬುದಾಗಿ ಬದಲಾಯಿಸಲಾಗಿತ್ತು. ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಬಾಲರಾಮನ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಲಾಗಿತ್ತು. ಇತರ ಧರ್ಮಗಳನ್ನು ವಿಶ್ಲೇಷಿಸಿ, ವಿಮರ್ಶಿಸಲು ಹಿಂದೇಟು ಹಾಕಲಾಗುತ್ತದೆ. ಆದರೆ, ಹಿಂದು ಧರ್ಮದ ಬಗ್ಗೆ ಮಾತ್ರ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬಿಡುವುದಿಲ್ಲ ಎಂಬ ಅಸಮಾಧಾನ ಮಾತುಗಳು ಕೇಳಿ ಬರುತ್ತಿವೆ.