ನ್ಯೂಸ್

ಜೂಮ್ ವಿಡಿಯೋ ಕಾಲ್​ನಲ್ಲೇ ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

ಸಿಂಗಾಪುರ: ಅಕ್ರಮವಾಗಿ ಹೆರಾಯಿನ್ ವಹಿವಾಟು ನಡೆಸುತ್ತಿದ್ದ ಮಲೇಷ್ಯಾ ಮೂಲದ ಅಪರಾಧಿಯೊಬ್ಬನಿಗೆ ಸಿಂಗಾಪುರದ ಸುಪ್ರೀಂ ಕೋರ್ಟ್‌ ವಿಡಿಯೋ ಕಾಲ್​ ಮೂಲಕವೇ ಮರಣದಂಡನೆ ವಿಧಿಸಿದೆ. ಈ ಕ್ರಮವನ್ನು ಕೆಲ ಸಂಘಟನೆಗಳು ಟೀಕಿಸಿವೆಯಾದರೂ ಅಪರಾಧಿ ಮಾತ್ರ ವಿಡಿಯೋ ಕಾನ್ಫರೆನ್ಸ್​ನಲ್ಲಿ ತೀರ್ಪು ಪ್ರಕಟಿಸಿದ ಕ್ರಮವನ್ನು ಒಪ್ಪಿಕೊಂಡಿದ್ದಾನೆ.

ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಜೂಮ್​ ಆ್ಯಪ್​ ಅಳವಡಿಸಿಕೊಂಡು ​ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಏಪ್ರಿಲ್​ನಿಂದ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್, 2011ರಲ್ಲಿ ದಾಖಲಾಗಿದ್ದ ಮಾದಕವಸ್ತು ಹೆರಾಯಿನ್​ ವಹಿವಾಟು ಪ್ರಕರಣದ ತೀರ್ಪನ್ನು ಕಳೆದ ಶುಕ್ರವಾರ ಪ್ರಕಟಿಸಿದೆ. ಸಿಂಗಾಪುರದಲ್ಲಿ ರಿಮೋಟ್ ವಿಚಾರಣೆಯಿಂದ ಮರಣದಂಡನೆ ವಿಧಿಸಲ್ಪಟ್ಟ ಮೊದಲ ಕ್ರಿಮಿನಲ್ ಪ್ರಕರಣ ಇದಾಗಿದೆ.

ಮರಣದಂಡನೆಗೆ ಗುರಿಯಾದ ವ್ಯಕ್ತಿ 37 ವರ್ಷದ ಪುನಿಥಾನ್ ಜೆನಾಸನ್. ಮಲೇಷ್ಯಾ ಮೂಲದ ಈತನ ವಿರುದ್ಧ 2011ರಲ್ಲಿ ಅಕ್ರಮವಾಗಿ ಹೆರಾಯಿನ್​ ವಹಿವಾಟು ನಡೆಸುತ್ತಿದ್ದ ಆರೋಪದಡಿ ಸಿಂಗಾಪುರದಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಯ ಮುಂದುವರಿದ ಹಂತವನ್ನು ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ನಡೆಸಿದ ಇಲ್ಲಿನ ಸುಪ್ರೀಂಕೋರ್ಟ್​ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪುನಿಥಾನ್​ಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಪೀಟರ್ ಫರ್ನಾಂಡೊ, ನನ್ನ ಕಕ್ಷಿದಾರ ನ್ಯಾಯಾಧೀಶರ ತೀರ್ಪನ್ನು ಜೂಮ್ ಕರೆಯಲ್ಲಿ ಸ್ವೀಕರಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು ಯೋಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮರಣ ದಂಡನೆ ವಿಧಿಸುವಂತಹ ಪ್ರಕರಣಗಳಿಗೆ ಜೂಮ್​ ಆ್ಯಪ್​ ಬಳಸಿದ ಕ್ರಮವನ್ನು ಮಾನವ ಹಕ್ಕುಗಳ ಸಂಘಟನೆಗಳು ಟೀಕಿಸಿವೆ. ಕ್ಯಾಲಿಫೋರ್ನಿಯಾ ಮೂಲದ ಟೆಕ್ ಸಂಸ್ಥೆಯ ಪ್ರತಿನಿಧಿಗಳು ಕೂಡ ಸಿಂಗಾಪುರ ನ್ಯಾಯಾಲಯ ವಿಡಿಯೋ ಕಾಲ್​ ಬಳಸಿ ತೀರ್ಪು ನೀಡಿದ್ದನ್ನು ಟೀಕಿಸಿದ್ದಾರೆ.

ಡ್ರಗ್ಸ್​ ಮಾಫಿಯಾಕ್ಕೆ ಕಡಿವಾಣ ಹಾಕಲು ಕಠಿಣ ಶಿಕ್ಷೆ ವಿಧಿಸುತ್ತಿರುವ ಇಲ್ಲಿನ ನ್ಯಾಯಾಲಯ ಕಳೆದ ದಶಕಗಳಲ್ಲಿ ವಿದೇಶಿಯರನ್ನೂ ಒಳಗೊಂಡಂತೆ ನೂರಾರು ಅಪರಾಧಿಗಳನ್ನು ಗಲ್ಲಿಗೇರಿಸಿದೆ ಎನ್ನಲಾಗಿದೆ.

ಸಿಂಗಾಪುರದಲ್ಲಿ ಜಾರಿಯಲ್ಲಿರುವ ಮರಣದಂಡನೆ ಶಿಕ್ಷೆ ಅತ್ಯಂತ ಕ್ರೂರ ಮತ್ತು ಅಮಾನವೀಯ. ಈಗ ಜೂಮ್​ ವಿಡಿಯೋ ಕಾಲ್​ ಬಳಸಿಯೇ ಅಪರಾಧಿಗೆ ಮರಣದಂಡನೆ ವಿಧಿಸಲಾಗಿದೆ. ಇದನ್ನು ಗಮನಿಸಿದರೆ ಈ ದೇಶದಲ್ಲಿ ಇಂತಹ ತೀರ್ಪಿನ ಪ್ರಮಾಣ ಹೆಚ್ಚಲಿದೆ ಎಂದು ಮಾನವ ಹಕ್ಕು ವೀಕ್ಷಣೆಯ ಏಷ್ಯಾ ವಿಭಾಗದ ಉಪ ನಿರ್ದೇಶಕ ಫಿಲ್ ರಾಬರ್ಟ್‌ಸನ್ ಆತಂಕ ವ್ಯಕ್ತಪಡಿಸಿದ್ದಾರೆ. ನೈಜೀರಿಯಾದಲ್ಲೂ ಇದೇ ರೀತಿಯ ಪ್ರಕರಣವೊಂದರಲ್ಲಿ ಜೂಮ್ ಮೂಲಕ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಎಚ್‌ಆರ್‌ಡಬ್ಲ್ಯು ಟೀಕಿಸಿದೆ.