ನವದೆಹಲಿ: ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯ ಹೊಸ ಚಿತ್ರಗಳು ಬಹಿರಂಗಗೊಂಡಿದೆ. ಪಾಕಿಸ್ತಾನದ ವಾಯುಪಡೆ ಭಾರಿ ಆಘಾತ ಅನುಭವಿಸಿರುವುದು ಈ ಚಿತ್ರಗಳಿಂದ ಸ್ಪಷ್ಟವಾಗುತ್ತದೆ. ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್ ಅವರು ಈ ಚಿತ್ರಗಳನ್ನು ಬಹಿರಂಗಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ಲ್ಲಿ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರು 26 ಪ್ರವಾಸಿಗರ ಹತ್ಯೆ ಮಾಡಿದ ನಂತರ ಭಾರತ ಆಪರೇಷನ್ ಸಿಂಧೂರ ನಡೆಸಿತ್ತು. ಆಗ ಏನಾಯಿತು? ಸಂಘರ್ಷದ ಸಂದರ್ಭದಲ್ಲಿ ವಾಯುಪಡೆ ಹೇಗೆ ಕೆಲಸ ಮಾಡಿತ್ತು ಎಂಬುದನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್ ವಿವರಿಸಿದ್ದಾರೆ.
2019ರಲ್ಲಿ ಪುಲ್ವಾಮಾ ದಾಳಿಯ ಬಳಿಕ ಭಾರತೀಯ ಸೇನಾಪಡೆಗಳು ಬಾಲಾಕೋಟ್ ನಲ್ಲಿ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿ ಹಲವು ಉಗ್ರರನ್ನು ಹತ್ಯೆಗೈದಿದ್ದವು. ಆದರೆ ಆ ದಾಳಿ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನಮ್ಮವರಿಗೆ ಮನವರಿಕೆ ಮಾಡಿಕೊಡಲು ಹಲವು ಸವಾಲು ಎದುರಾಗಿದ್ದವು. ಆದರೆ ಈ ಬಾರಿ ನಾವು ಈ ಸವಾಲು ಮೀರಿ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಆಪರೇಷನ್ ಸಿಂಧೂರದ ಮಾಹಿತಿಯನ್ನು ಇಡೀ ಜಗತ್ತಿನ ಮುಂದೆ ಇರಿಸಿದ್ದೇವೆ ಎಂದು ಎ.ಪಿ. ಸಿಂಗ್ ಉಪಗ್ರಹ ಚಿತ್ರ ಸಾಕ್ಷ್ಯ ಮುಂದಿಟ್ಟರು.
ಆಪರೇಷನ್ ಸಿಂಧೂರದಲ್ಲಿ ಭಯೋತ್ಪಾದಕರ ನೆಲೆಗಳು ಮತ್ತು ಕೇಂದ್ರಗಳು ಹಾಗೂ ಪಾಕ್ ಸೇನೆಯ ನೆಲೆಗಳ ಮೇಲೆ ದಾಳಿ ನಡೆಸುವಲ್ಲಿ ಸ್ವದೇಶಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ತನ್ನನ್ನು ರಕ್ಷಿಸಿಕೊಳ್ಳುವ ದೇಶದ ಸಾಮರ್ಥ್ಯ ಸಾಬೀತಾಗಿದೆ. ಕಾರ್ಯಾಚರಣೆ ವೇಳೆ ಸುಖೋಯ್ 30 ಎಂಕೆ 1 ವಿಮಾನದ ಮೂಲಕ ಬ್ರಹ್ಮೋಸ್ ಕ್ಷಿಪಣಿಗಳನ್ನು ಹಾರಿಸಲಾಗಿತ್ತು. ಎಲ್ಲಾ ದಾಳಿಗಳಲ್ಲೂ ಬ್ರಹ್ಮೋಸ್ ಯಶಸ್ವಿಯಾಗಿದ್ದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಧ್ಯಕ್ಷ ಸಮೀರ್ ಕಾಮತ್ ತಿಳಿಸಿದ್ದಾರೆ.
ಪಾಕಿಸ್ತಾನದ ಅರಿಫ್ವಾಲದಲ್ಲಿ ರೇಡಾರ್ ಘಟಕವನ್ನು ಯಶಸ್ವಿಯಾಗಿ ನಾಶಪಡಿಸಲಾಗಿತ್ತು.
ಚುನಿಯಾನ್ನಲ್ಲಿ ಧ್ವಂಸಗೊಂಡ ರೇಡಾರ್ನ ತಲೆಯ ಭಾಗದ ಚಿತ್ರವನ್ನು ವಾಯುಪಡೆ ಬಿಡುಗಡೆ ಮಾಡಿದ್ದು, ಸುಟ್ಟ ಗುರುತುಗಳು ಸ್ಪಷ್ಟವಾಗಿ ಕಾಣುತ್ತಿವೆ.
ನೂರ್ ಖಾನ್ ವಾಯುನೆಲೆಯಲ್ಲಿ ಆಗಿರುವ ಹಾನಿಯನ್ನು ಎಚ್ಚು ರೆಸಲ್ಯೂಷನ್ ಉಪಗ್ರಹ ಚಿತ್ರಗಳು ಖಚಿತಪಡಿಸಿವೆ.
ರಹೀಂ ಯಾರ್ ಖಾನ್ ಬೇಸ್ನ ರನ್ವೇ ಮತ್ತು ಯುಎವಿ ಕೇಂದ್ರಕ್ಕೆ ಹಾನಿ
ಭೋಲಾರಿಯಲ್ಲಿನ ಎಇಡಬ್ಲು್ಯ ಆಂಡ್ ಸಿ (ಏರ್ಬಾರ್ನ್ ಅರ್ಲಿ ವಾರ್ನಿಂಗ್ ಆಂಡ್ ಕಂಟ್ರೋಲ್) ಹ್ಯಾಂಗರ್ ಮೇಲೆ ದಾಳಿ ನಡೆಸಲಾಗಿತ್ತು. ಈ ಸಮಯದಲ್ಲಿ ಒಂದು ವಿಮಾನವು ಹ್ಯಾಂಗರ್ನೊಳಗೆ ಇದ್ದಿರಬಹುದು ಎಂದು ಭಾವಿಸಲಾಗಿದೆ.
ಜಾಕೋಬಾಬಾದ್ನಲ್ಲಿ ಎಫ್-16 ವಿಮಾನಗಳನ್ನು ಇರಿಸಲಾಗಿದ್ದ ಮುಖ್ಯ ಹ್ಯಾಂಗರ್ ಮೇಲೆ ದಾಳಿ ನಡೆಸಲಾಗಿದೆ. ಎಫ್-16 ವಿಮಾನಗಳು ಕೂಡ ಹಾನಿಗೊಳಗಾಗಿರಬಹುದು ಎಂದು ಶಂಕಿಸಲಾಗಿದೆ. ಈ ಹ್ಯಾಂಗರ್ನ ಅರ್ಧಕ್ಕಿಂತ ಹೆಚ್ಚು ಭಾಗ ಧ್ವಂಸಗೊಂಡಿದೆ.