ನವದೆಹಲಿ: ಆಪರೇಷನ್ ಸಿಂಧೂರ ಭಾರತದ ರಕ್ಷಣಾ ಕ್ಷೇತ್ರದ ಉತ್ಪಾದನೆಯ ವಿಶ್ವಾಸಾರ್ಹತೆಯನ್ನು ಜಗತ್ತಿಗೆ ಎತ್ತಿ ತೋರಿಸಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ರಕ್ಷಣಾ ಉತ್ಪಾದನೆ 1.25 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಹೇಳಿದ್ದಾರೆ.
ಶನಿವಾರ ವರ್ಚುವಲ್ ಉದ್ಯೋಗ ಮೇಳದಲ್ಲಿ 51,000ಕ್ಕೂ ಅಧಿಕ ಮಂದಿಗೆ ನೇಮಕಾತಿ ಪತ್ರ ವಿತರಿಸಿದ ನಂತರ ಮಾತನಾಡಿದ ಮೋದಿ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ತಮ್ಮ ಸರ್ಕಾರ ಆದ್ಯತೆ ನೀಡಿದೆಯೆಂದು ಹೇಳಿದರು. ಕಳೆದ 11 ವರ್ಷಗಳಲ್ಲಿ ದೇಶ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದೆ ಎಂದರು. ಬಡವರಿಗಾಗಿ ನಾಲ್ಕು ಕೋಟಿಗೂ ಹೆಚ್ಚು ಮನೆಗಳ ನಿಮಾಣ, 10 ಕೋಟಿಗೂ ಅಧಿಕ ಹೊಸ ಎಲ್ಪಿಜಿ ಸಂಪರ್ಕ, ಮನೆಛಾವಣಿಗಳ ಸೌರಶಕ್ತಿ ಕಾರ್ಯಕ್ರಮ ಒಳಗೊಂಡಂತೆ ತಮ್ಮ ಸರ್ಕಾರದ ಕಲ್ಯಾಣ ಯೋಜನೆಗಳು ಲಕ್ಷಾಂತರ ಉದ್ಯೋಗಾಕಾಶಗಳನ್ನು ಸೖಷ್ಟಿಸಿವೆ. ಇತರ ಹಲವು ಉಪಕ್ರಮಗಳು ಕೂಡ ಉತ್ಪಾದನಾ ವಲಯದಲ್ಲಿ ಬೆಳವಣಿಗೆಗ ಕಾರಣವಾಗಿವೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಭಾರತದ ಜನಸಂಖ್ಯೆ ಮತ್ತು ಪ್ರಜಾಪ್ರಭುತ್ವದ ಶಕ್ತಿ ಬಗ್ಗೆ ಇಡೀ ಜಗತ್ತೇ ಮಾತನಾಡುತ್ತಿದೆ ಎಂದು ಇತ್ತೀಚಿನ ಪಂಚ ರಾಷ್ಟ್ರ ಪ್ರವಾಸದ ಬಗ್ಗೆ ಪ್ರಸ್ತಾಪಿಸಿದ ಮೋದಿ ಹೇಳಿದರು. ಕಳೆದ 10 ವರ್ಷಗಳಲ್ಲಿ ದೇಶದ 25 ಕೋಟಿ ಜನರನ್ನು ಬಡತನದಿಂದ ಹೊರ ತರಲಾಗಿದೆ. ಉದ್ಯೋಗ ಮತ್ತು ಆದಾಯ ಮೂಲಗಳನ್ನು ಸೃಷ್ಟಿಸದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ ಎಂದರು. ಈ ಬಡಜನರು ಬಹಳ ಕಷ್ಟದಿಂದ ಬದುಕು ಸಾಗಿಸುತ್ತಿದ್ದು ಸಾವಿನ ಭಯದಿಂದ ನರಳುತ್ತಿದ್ದರು. ಆದರೆ ಅವರು ಈಗ ಬಲಿಷ್ಠರಾಗಿ ಬಡತನವನ್ನು ಸೋಲಿಸಿದ್ದಾರೆ ಎಂದರು.