ನ್ಯೂಸ್

ಕಳೆದೊಂದು ವರ್ಷದಿಂದ ಸುಶಾಂತ್​ ಸಿಂಗ್​ ರಜಪೂತ್​ಗೆ ಯಾವುದೋ ಚಿಂತೆ ಕಾಡುತ್ತಿತ್ತು...

ಮುಂಬೈ: ಕಳೆದೊಂದು ವರ್ಷದಿಂದ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರನ್ನು ಯಾವುದೋ ಚಿಂತೆ ಕಾಡುತ್ತಿತ್ತು. ಆದರೆ ಅದೇನೆಂದು ಅವರು ಹೇಳಿಕೊಂಡಿರಲಿಲ್ಲ ಎಂದು ಬಾಲಿವುಡ್​ ನಟಿ ಹಾಗೂ ಒಂದು ಕಾಲದಲ್ಲಿ ಸುಶಾಂತ್​ ಜತೆ ಲಿವ್​ ಇನ್​ ರಿಲೇಷನ್​ಷಿಪ್​ನಲ್ಲಿದ್ದ ಅಂಕಿತಾ ಲೋಖಂಡೆ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಒಂದು ವೇಳೆ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ ಆದರೆ ಅದು ತಮ್ಮ ವೃತ್ತಿಜೀವನ ಸಂಬಂಧಿತ ವಿಷಯಕ್ಕಾಗಿ ಅಲ್ಲ. ಬೇರೇನೋ ಬಹುದೊಡ್ಡ ಕಾರಣವಿರಬೇಕು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಮರಣಿಸಿದ ವಿಷಯ ಸುದ್ದಿಗಾರರಿಂದ ತಮಗೆ ತಿಳಿಯಿತು ಎಂದಿರುವ ಅವರು, ಒಬ್ಬ ವರದಿಗಾರರು ಈ ಬಗ್ಗೆ ನನ್ನನ್ನು ಪ್ರಶ್ನಿಸಿದರು. ಅದನ್ನು ಕೇಳಿ ಒಂದುಕ್ಷಣ ನಾನು ಗಲಿಬಿಲಿಗೊಂಡೆ. ಅವರ ಸತ್ತಿದ್ದಾರೆ ಎಂದು ಊಹಿಸಿಕೊಳ್ಳಲೂ ನನಗೆ ಕಷ್ಟವಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

ತಾವು ಸುಶಾಂತ್​ ಸಿಂಗ್​ ರಜಪೂತ್​ ಅವರ ನಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದುದಾಗಿ ಹೇಳಿದ ಅವರು, ಒಂದು ವರ್ಷದ ಹಿಂದೆ ಸುಶಾಂತ್​ ಅವರು ತಮ್ಮ ಕೆಲಸ ಮತ್ತು ನಟನೆಯ ಬಗ್ಗೆ ತುಂಬಾ ಸಂತೋಷವಾಗಿದ್ದರು. ಆ ಸಂತೋಷ ಅವರ ಮುಖದಲ್ಲೇ ಕಾಣಿಸುತ್ತಿತ್ತು ಎಂದು ಹೇಳಿದ್ದಾರೆ.

ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಬಗ್ಗೆ ಪ್ರಶ್ನಿಸಿದಾಗ, ನನಗೆ ಅವರು ಯಾರೆಂದು ಗೊತ್ತಿಲ್ಲ. ಆದರೆ, ಸುಶಾಂತ್​ ಅವರನ್ನು ಚೆನ್ನಾಗಿ ಬಲ್ಲೆ. ಅವರು ತುಂಬಾ ಭಾವುಕ ವ್ಯಕ್ತಿಯಾಗಿದ್ದರು. ಅವರ ಹಣಕಾಸಿನ ವ್ಯವಹಾರದ ಬಗ್ಗೆಯೂ ನನಗೆ ಏನೊಂದು ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುಶಾಂತ್​ ಅವರ ಕುರಿತು ಮುಂಬೈ ಪೊಲೀಸರು ನನ್ನನ್ನು ಪ್ರಶ್ನಿಸಿದರು. ಅದರು ಕೇವಲ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆಗಿರಲಿಲ್ಲ. ಬಹುಶಃ ನನ್ನ ಮಾತಿನಲ್ಲಿ ಅವರಿಗೆ ಯಾವುದೇ ಹುರುಳು ಸಿಕ್ಕಂತೆ ಇಲ್ಲ. ಆದರೆ ಸುಶಾಂತ್​ ಅವರ ಕುಟುಂಬದವರನ್ನು ಈ ಬಗ್ಗೆ ಅವರು ಏಕೆ ಪ್ರಶ್ನಿಸಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಜೀವನ್ಮುಖಿ ವ್ಯಕ್ತಿತ್ವ: ಸುಶಾಂತ್​ ಸಿಂಗ್​ ರಜಪೂತ್​ ಅವರು ಖಿನ್ನತೆ ಒಳಗಾಗುವಂಥ ವ್ಯಕ್ತಿ ಆಗಿರಲಿಲ್ಲ ಎಂದು ಅಂಕಿತಾ ಲೋಖಂಡೆ ಹೇಳಿದ್ದಾರೆ.

ಸುಶಾಂತ್​ ಅವರದ್ದು ಜೀವನ್ಮುಖಿ ವ್ಯಕ್ತಿತ್ವ. ಕೆಲವೊಮ್ಮೆ ಅವರಿಗೆ ತುಂಬಾ ಸಿಟ್ಟು ಬರುತ್ತಿತ್ತು ನಿಜ. ಆದರೆ, ಅವರು ಎಂದೂ ಖಿನ್ನರಾಗಿದ್ದನ್ನು ನಾನು ಕಂಡಿಲ್ಲ ಎಂದು ಹೇಳುವ ಮೂಲಕ ರಿಯಾ ಚಕ್ರವರ್ತಿ ಅವರು ಸುಪ್ರೀಂಕೋರ್ಟ್​ಗೆ ನೀಡಿರುವ ಸುಶಾಂತ್​ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.

ಜೀವನ ಮುಂದುವರಿದಂತೆ ವ್ಯಕ್ತಿಗಳಲ್ಲಿ ಬದಲಾವಣೆಗಳು ಆಗುವುದು ಸಹಜ. ಆದರೆ, ಆ ವ್ಯಕ್ತಿಯ ಮೂಲಭೂತ ವ್ಯಕ್ತಿತ್ವ ಅಥವಾ ಜೀವನಕ್ರಮದಲ್ಲಿ ಬದಲಾವಣೆಗಳು ಆಗುವುದು ತುಂಬಾ ಕಡಿಮೆ. ಈ ವಿಷಯದಲ್ಲಿ ಸುಶಾಂತ್​ ತುಂಬಾ ಸಮತೋಲಿತ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದಾರೆ.