ಟ್ರೇಡ್ ಲೈಸೆನ್ಸ್ ಮೇಳಕ್ಕೆ ಡಾ. ಕವಿತಾ ಯೋಗಪ್ಪನವರ್ ಚಾಲನೆ ನೀಡಿದರು. ಎನ್.ಗೋಪಿನಾಥ್, ಜಿ.ವಿಜಯ್‌ಕುಮಾರ್, ವಸಂತ್ ಹೋಬಳಿದಾರ್, ಬಿ.ಗೋಪಿನಾಥ್ ಮುಂತಾದವರಿದ್ದರು.  
ನ್ಯೂಸ್

ಉದ್ಯಮಿಗಳ ಪರವಾನಗಿ ಪ್ರಕ್ರಿಯೆ ಸರಳೀಕರಣ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಹಾಗೂ ವ್ಯಾಪಾರದ ಪರವಾನಗಿ ಪ್ರಕ್ರಿಯೆ ಸರಳೀಕರಣಗೊಳಿಸುವ ಆಶಯದೊಂದಿಗೆ ಟ್ರೇಡ್ ಲೈಸೆನ್ಸ್ ಮೇಳ ಆಯೋಜಿಸಲಾಗಿದೆ. ಉದ್ಯಮಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಟ್ರೇಡ್ ಲೈಸೆನ್ಸ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರವಾನಗಿ ಪಡೆಯಲು ಉದ್ಯಮಿಗಳಿಗೆ ಆಗುವ ತೊಂದರೆಗಳನ್ನು ಪರಿಹರಿಸುವ ಆಶಯದಿಂದ ಮೇಳ ನಡೆಸಲಾಗುತ್ತಿದೆ. ಇದರಿಂದ ಉದ್ಯಮಿಗಳಿಗೆ ಸಮಯ ಉಳಿತಾಯವಾಗಲಿದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಮೇಳವನ್ನು ಮೂರು ದಿನ ನಡೆಸಲಾಗುತ್ತಿದೆ. ಕಳೆದ ಬಾರಿ ನಡೆಸಿದ್ದ ಮೇಳದಲ್ಲಿ ಸಾವಿರಕ್ಕೂ ಅಧಿಕ ವ್ಯಾಪಾರಸ್ಥರು ಪರವಾನಗಿ ಪಡೆದಿದ್ದರು. ಪಾಲಿಕೆ ಅಧಿಕಾರಿಗಳು, ಆರೋಗ್ಯ ನೀರಿಕ್ಷಕರು ಹಾಗೂ ಸಿಬ್ಬಂದಿ ಸ್ಥಳದಲ್ಲೇ ಅರ್ಜಿದಾರರಿಂದ ದಾಖಲೆಗಳನ್ನು ಪಡೆದುಕೊಂಡು ಪರಿಶೀಲಿಸಿ ಲೈಸೆನ್ಸ್ ನೀಡುತ್ತಿದ್ದಾರೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕರಾದ ಗಣೇಶ್ ಅಂಗಡಿ, ಮಂಜೇಗೌಡ, ಪ್ರದೀಪ್ ಎಲಿ, ಮರಿಸ್ವಾಮಿ, ಪರಮೇಶ್ವರ್ ಮುಂತಾದವರಿದ್ದರು.