ಶಿವಮೊಗ್ಗ: ಆದಾಯ ತೆರಿಗೆ ಇಲಾಖೆ ಕೈಗೊಂಡಿರುವ ಸುಧಾರಣೆಯ ಕ್ರಮಗಳಿಂದ ಆದಾಯ ತೆರಿಗೆ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಶಿವಮೊಗ್ಗ ಆದಾಯ ತೆರಿಗೆ ಇಲಾಖೆ, ಜಿಲ್ಲಾ ಲೆಕ್ಕ ಪರಿಶೋಧಕರು, ಜಿಲ್ಲಾ ತೆರಿಗೆ ಸಲಹೆಗಾರರ ಸಂಘಗಳ ಸಹಯೋಗದೊಂದಿಗೆ ಕೇಂದ್ರ ಬಜೆಟ್-2025ರಲ್ಲಿ ಆದಾಯ ತೆರಿಗೆ, ಟಿಡಿಎಸ್ ಮತ್ತು ಟಿಸಿಎಸ್‌ನ ನಿಯಮಗಳಲ್ಲಿ ಆದ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಸಂಖ್ಯೆಗೆ ಹೋಲಿಸಿದರೆ ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಆದಾಯ ತೆರಿಗೆ ಇಲಾಖೆಯ ಜನಸ್ನೇಹಿ ಕಾರ್ಯಕ್ರಮ ಹಾಗೂ ದಶಕದಿಂದ ಆದ ತೆರಿಗೆ ಸುಧಾರಣೆಗಳಿಂದ ತೆರಿಗೆದಾರನಿಗೆ ಪ್ರಯೋಜನವಾಗಿದೆ. ಖಜಾನೆಗೆ ಹೆಚ್ಚಿನ ಪ್ರಮಾಣದಲ್ಲಿ ನೇರ ತೆರಿಗೆ ಬಂದಿದೆ. ಇದರಿಂದ ದೇಶದಲ್ಲಿ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ ಹಾಗೂ ಮೂಲ ಸೌಕರ್ಯದ ಅಭಿವೃದ್ಧಿಯಾಗಿದೆ. ಇಂತಹ ಅರಿವು ಕಾರ್ಯಕ್ರಮಗಳಿಗೆ ಆದಾಯ ತೆರಿಗೆ ಇಲಾಖೆ ಜತೆಗೆ ಸಂಘ ಕೈಜೋಡಿಸುತ್ತದೆ ಎಂದರು.
ಬೆಂಗಳೂರಿನ ಆದಾಯ ತೆರಿಗೆ (ಎಸಿಐಟಿ) ಹೆಚ್ಚುವರಿ ಆಯುಕ್ತ ಪಿ.ವಿಮಲ್ ರಾಜ್ ಮಾತನಾಡಿ, ನಾಗರಿಕರಲ್ಲಿ ಆದಾಯ ತೆರಿಗೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಸಕಾಲದಲ್ಲಿ ಆದಾಯ ತೆರಿಗೆ ಸಲ್ಲಿಸುವುದರಿಂದ ಆಗುವ ಅನುಕೂಲಗಳು ಮತ್ತು ಅದನ್ನು ಸಲ್ಲಿಸದಿದ್ದರೆ ಆಗುವ ಅನನುಕೂಲಗಳನ್ನು ವಿವರಿಸಿದರು.
ಶಿವಮೊಗ್ಗ ಆದಾಯ ತೆರಿಗೆ ಅಧಿಕಾರಿ ಕೆ.ಶ್ರೀನಿವಾಸ ರಾವ್ ಮಾತನಾಡಿ, ತೆರಿಗೆದಾರನು ಸರಿಯಾಗಿ ಆದಾಯ ತೆರಿಗೆ ರಿಟನ್ಸ್ ಅನ್ನು ಸಲ್ಲಿಸುವ ಮೂಲಕ ವ್ಯಾಜ್ಯಗಳಿಗೆ ಒಳಪಡದೆ ಸರಿಯಾದ ದಾಖಲೆಗಳನ್ನು ಹೇಗೆ ನಿರ್ವಹಣೆ ಮಾಡಬಹುದು ಎನ್ನುವುದರ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು.
ದಾವಣಗೆರೆ ಆದಾಯ ತೆರಿಗೆ ಅಧಿಕಾರಿ ಸುಬ್ಬರಾಜು ಮಾತನಾಡಿ, ಟಿಡಿಎಸ್ ಮತ್ತು ಟಿಸಿಎಸ್ ನಿಯಮಾವಳಿಗೆ ಇತ್ತೀಚಿಗೆ ಆದ ತಿದ್ದುಪಡಿಗಳ ಕುರಿತು ಪಿಪಿಟಿ ಮೂಲಕ ವಿವರಣೆ ನೀಡಿದರು.
ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಪ್ರೋಗ್ರಾಂ ಕಮಿಟಿ ಚೇರ್ಮನ್ ಸಿ.ಎ.ಶರತ್, ನಿರ್ದೇಶಕರಾದ ಗಣೇಶ್ ಎಂ. ಅಂಗಡಿ, ಎಸ್.ಎಸ್.ಉದಯ್ಕುಮಾರ್, ವಿನೋದ್‌ಕುಮಾರ್ ಜೈನ್, ಎಚ್.ಎಸ್.ನರೇಂದ್ರ, ಎಸ್.ಪಿ.ಶಂಕರ್, ಕೆ.ಎನ್.ರಾಜಶೇಖರ್, ರವಿಪ್ರಕಾಶ್ ಜನ್ನಿ, ಲಕ್ಷ್ಮೀ ಗೋಪಿನಾಥ್, ಬಿ.ಸುರೇಶ್‌ಕುಮಾರ್, ಮಾಜಿ ಅಧ್ಯಕ್ಷರಾದ ಕೆ.ವಿ.ವಸಂತ್‌ಕುಮಾರ್, ಶಿವಮೊಗ್ಗ ಜಿಲ್ಲಾ ಸಿಎ ಅಸೋಸಿಯೇಷನ್ ಅಧ್ಯಕ್ಷ ಎನ್.ಎಲ್.ಪ್ರಸಾದ್ ಇತರರಿದ್ದರು.