ಮೋಡ ಕವಿದ ವಾತಾವರಣ 
ನ್ಯೂಸ್

Moda Kavida Vathavarana - ಇದೇ 26ಕ್ಕೆ ಥಿಯೇಟರ್​ಗಳಲ್ಲಿ ಮಳೆ

Moda Kavida Vathavarana -
"ಒಂದು ಸರಳ ಪ್ರೇಮಕಥೆ'ಯ ಬಳಿಕ ನಿರ್ದೇಶಕ ಸಿಂಪಲ್​ ಸುನಿ ಮತ್ತು ನಿರ್ಮಾಪಕ ಮೈಸೂರ್​ ರಮೇಶ್​ "ಮೋಡ ಕವಿದ ವಾತಾವರಣ' ಮೂಲಕ ಮತ್ತೆ ಒಂದಾಗಿದ್ದಾರೆ. ಶೀರ್ಷಿಕೆಯ ಮೂಲಕವೇ ಗಮನ ಸೆಳೆಯುತ್ತಿರುವ ಈ ಚಿತ್ರ ಸದ್ಯ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಇದೊಂದು ಸೈಂಟಿಫಿಕ್​ ಫಿಕ್ಷನಲ್​ ಲವ್​ಸ್ಟೋರಿಯಾಗಿದ್ದು, ಶೀಲಮ್​ ಸ್ವಾಮಿ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಇಬ್ಬರು ನಾಯಕಿಯರಿದ್ದು, ಸಾತ್ವಿಕಾ ರಾವ್​ ಮತ್ತು ಮೋಕ್ಷಾ ಕುಶಾಲ್​ ನಟಿಸಿದ್ದಾರೆ. ಇದೇ ತಿಂಗಳ 26ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್​ ಆಗಲಿದ್ದು, ಈಗಾಗಲೇ ಪ್ರಚಾರದ ಕೆಲಸಗಳು ಭರ್ಜರಿಯಾಗಿ ಸಾಗಿವೆ. ಅದರ ಭಾಗವಾಗಿ ಇತ್ತೀಚೆಗಷ್ಟೆ ಚಿತ್ರತಂಡ ನಾಯಕನನ್ನು ಪರಿಚಯಿಸುವ ಟೀಸರ್​ ಬಿಡುಗಡೆ ಮಾಡಿದೆ. ಸಿಂಪಲ್​ ಸುನಿ, ""ಮೋಡ ಕವಿದ ವಾತಾವರಣ' ನನ್ನ ಸಿನಿಮಾ ಜೀವನದ ಸ್ಪೆಷಲ್​ ಸಿನಿಮಾ. ನನ್ನ ಸಿನಿಮಾಗಳ ಟ್ರೇಲರ್​ ಚೆನ್ನಾಗಿ ಕಟ್​ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಈ ಚಿತ್ರದ ಟ್ರೇಲರ್​ ಕಟ್​ ಮಾಡುವುದೇ ಕಷ್ಟಸಾಧ್ಯವಾಗಿದೆ. ಹೀಗಾಗಿ ಸಿನಿಮಾದ ಅರ್ಧ ಭಾಗವನ್ನಷ್ಟೇ ಟ್ರೇಲರ್​ ಕಟ್​ ಮಾಡಿ, ಉಳಿದರ್ಧ ಚಿತ್ರವನ್ನು ಥಿಯೇಟರ್​ನಲ್ಲೇ ತೋರಿಸಲು ನಿರ್ಧರಿಸಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ. ಇನ್ನು ಚಿತ್ರಕ್ಕೆ ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಮತ್ತು ಆದಿತ್ಯ ಕಶ್ಯಪ್​ ಸಂಕಲನವಿರಲಿದೆ.


ಎಲ್ಲ ಇದ್ದರೂ ಅಸಾಧ್ಯ...

ಸಿಂಪಲ್​ ಸುನಿ ಗರಡಿಯಲ್ಲಿ ಪಳಗಿರುವ ನಾಯಕ ಶೀಲಮ್​ ಈ ಹಿಂದೆ ಕೆಲ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. "ಮೋಡ ಕವಿದ ವಾತಾವರಣ'ದಿಂದ ನಾಯಕನಾಗಿರುವ ಅವರು, "ಹೀರೋ ಎಂದರೆ ಪವಾಡ. ಎಲ್ಲರೂ ಹೀರೋ ಆಗಲು ಸಾಧ್ಯವಿಲ್ಲ. ಎಷ್ಟೇ ದುಡ್ಡಿರಲಿ, ಪ್ರತಿಭೆ ಇರಲಿ, ಡಾನ್ಸ್​& ೈಟ್ಸ್​ ಬರಲಿ, ನೋಡಲು ಚೆನ್ನಾಗಿದ್ದರೂ ಆಗಲ್ಲ. ಆದರೆ, ಅದೆಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಆ ಪವಾಡ ಆಗಿದ್ದು ನಿರ್ದೇಶಕರಿಂದ' ಎಂದು ಸಂತಸ ಹಂಚಿಕೊಂಡರು.