ಯಂಕಣ್ಣ ಸಾಗರ್ ಬೆಂಗಳೂರು
ಚಾಲನೆಯಲ್ಲಿರುವ ಸಿಮ್ ಕಾರ್ಡ್ ನಿಷ್ಕ್ರಿಯಗೊಳಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುವ ವ್ಯವಸ್ಥಿತ ಜಾಲ ತಲೆ ಎತ್ತಿದೆ. ಉದ್ಯಮಿಯೊಬ್ಬರು ಬಳಸುತ್ತಿದ್ದ ಸಿಮ್ ಡೀಆಕ್ಟಿವೇಟ್ ಮಾಡಿರುವ ಖದೀಮರು, ಅದೇ ಸಂಖ್ಯೆಯ ಡೂಪ್ಲಿಕೇಟ್ ಸಿಮ್ ಪಡೆದುಕೊಂಡು ಫೋನ್ ನಂಬರ್ಗೆ ಲಿಂಕ್ ಆಗಿದ್ದ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ದೋಚಿದ್ದಾರೆ. ಈ ಕುರಿತು ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೖೆಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಗಿದ್ದು ಏನು?: ಮಲ್ಲೇಶ್ವರದ ನಿವಾಸಿ ಉದ್ಯಮಿ ಫಣಿರಾಜು ಎಂಬುವರು ‘ಕಾರ್ಪೆಟ್ ಲಿಂಕ್’ ಹೆಸರಿನ ಪೀಠೋಪಕರಣ ಮಾರಾಟ ಮಳಿಗೆಯನ್ನು ತೆರೆದಿದ್ದಾರೆ. ಇವರು ಬಳಸುತ್ತಿದ್ದ (ಬಿಎಸ್ಎನ್ಎಲ್) ಸಿಮ್ ಮಾ.21 ರಂದು ಆಕಸ್ಮಿಕವಾಗಿ ನೆಟ್ವರ್ಕ್ ಕಡಿತವಾಗಿತ್ತು. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿರಬಹುದು ಎಂದು ಭಾವಿಸಿದ್ದರು. ಮರುದಿನ ಭಾನುವಾರ (ಮಾ.22) ರಜೆ ಇದ್ದ ಹಿನ್ನೆಲೆಯಲ್ಲಿ ಪರಿಶೀಲಿಸಿ ಕೊಳ್ಳಲು ಸಾಧ್ಯ ವಾಗಿಲ್ಲ. ಮಾ.23 ರಂದು ಸಿಮ್ಕಾರ್ಡ್ ವಿತರಿಸುವ ಗ್ರಾಹಕರ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಸಿಮ್ ನಿಷ್ಕ್ರಿಯ ಆಗಿರು ವುದು ಗೊತ್ತಾಗಿದೆ. ಈ ವೇಳೆ ಆಧಾರ್ ಕಾರ್ಡ್, ಫೋಟೋ ಹಾಗೂ ಮತ್ತಿತರ ದಾಖಲೆಗಳನ್ನು ಕೊಟ್ಟು ಅದೇ ಸಂಖ್ಯೆಯ ನಕಲು ಸಿಮ್ ಪಡೆದುಕೊಂಡಿದ್ದಾರೆ. ಅದೇ ದಿನ ಮಧ್ಯಾಹ್ನ 12 ಗಂಟೆಯಲ್ಲಿ ಸಿಮ್ ಆಕ್ಟಿವೇಟ್ ಆಗಿದ್ದು, ಒಟಿಪಿ ನಂಬರ್ ಹಾಗೂ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ವರ್ಗಾವಣೆಯಾಗಿರುವ ಸಂದೇಶ ಬಂದಿದೆ. ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಮಾ.22ರಂದು (ಸಿಮ್ಕಾರ್ಡ್ ‘ಡೀ ಆಕ್ಟಿವೇಟ್’ ಆಗಿದ್ದ ಅವಧಿ) ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಖದೀಮರು ಚಾಲ್ತಿಯಲ್ಲಿದ್ದ ಸಿಮ್ ಕಾರ್ಡ್ ನಿಷ್ಕ್ರಿಯಗೊಳಿಸಿ ಖಾತೆಗೆ ಕನ್ನ ಹಾಕಿರುವುದು ಬಯಲಾಗಿದೆ.
ಎರಡು ಖಾತೆಗಳಿಗೆ ಟ್ರಾನ್ಸ್ಫರ್!: ಫಣಿರಾಜು ಬ್ಯಾಂಕ್ ಖಾತೆಯಿಂದ ನಾಲ್ಕು ಹಂತದಲ್ಲಿ ಇಬ್ಬರ ಖಾತೆಗೆ ವರ್ಗಾವಣೆಯಾಗಿದೆ. ಮಾ.22ರಂದು ಪ್ರದೀಪ್ ಶರ್ಮಾ ಎಂಬಾತನ ಖಾತೆಗೆ ಐಎಂಪಿಎಸ್ ಮೂಲಕ 50 ಸಾವಿರ ರೂ., ಹಾಗೂ ದೇವೇಂದ್ರ ಖೋಯಾ ಎಂಬಾತನ ಖಾತೆಗೆ 1 ಲಕ್ಷ ರೂ. ನೆಫ್ಟ್ ಮೂಲಕ ವರ್ಗಾವಣೆಯಾಗಿದೆ. ಇದೇ ರೀತಿ ಮಾ. 23ರಂದು 50 ಸಾವಿರ ರೂ. ವರ್ಗಾವಣೆಯಾಗಿದೆ. ಇದಾದ ಬಳಿಕ ಮತ್ತೇ ದೇವೇಂದ್ರ ಖಾತೆಗೆ 1 ಲಕ್ಷ ರೂ. ವರ್ಗಾಯಿಸಲು ಮುಂದಾಗಿದ್ದು, ಟ್ರಾನ್ಸ್ಫರ್ ವಿಫಲವಾಗಿದೆ. ದೇವೇಂದ್ರ ಖೋಯಾ ಖಾತೆ ಭೋಪಾಲ್ನಲ್ಲಿರುವ ಫೆಡರಲ್ ಬ್ಯಾಂಕ್ ಎಂಬುದು ಪರಿಶೀಲನೆಯಲ್ಲಿ ಗೊತ್ತಾಗಿದೆ.
ಆಧಾರ್ಕಾರ್ಡ್ ಕೊಡುವಂತೆ ಒತ್ತಾಯ: ಏ.30ರಂದು ರಘು ಎಂಬ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿ, ತಾನು ಎಚ್ಎಎಲ್ ಸಮೀಪದ ಸರ್ಕಾರಿ ಕಚೇರಿಯ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಕಚೇರಿಯಲ್ಲಿ ಏ.21ರಂದು ಡೂಪ್ಲಿಕೇಟ್ ಸಿಮ್ಾರ್ಡ್ ಪಡೆದುಕೊಂಡಿದ್ದೀರಿ. ಆಧಾರ್ ಕಾರ್ಡ್ ದಾಖಲೆ ನೀಡುವಂತೆ ಒತ್ತಾಯಿಸಿದ್ದ. ಅಲ್ಲದೇ, ಆಧಾರ್ಕಾರ್ಡ್ ಮತ್ತು ಫೋಟೋ ಕಳುಹಿಸುವಂತೆ ವಾಟ್ಸ್ಆಪ್ಗೆ ಸಂದೇಶ ಕಳುಹಿಸಿದ್ದ. ಇದಕ್ಕೆ, ‘ನಿಮ್ಮ ಕಚೇರಿಯಲ್ಲಿ ಡೂಪ್ಲಿಕೇಟ್ ಸಿಮ್ ಕಾರ್ಡ್ ಪಡೆದಿಲ್ಲ. ಏ.23ರಂದು ಮಲ್ಲೇಶ್ವರದ ಕಚೇರಿಯಲ್ಲಿ ದಾಖಲೆ ಪಡೆದುಕೊಂಡಿದ್ದೇನೆ.ಸಿಮ್ ಕಾರ್ಡ್ ನಿಷ್ಕ್ರಿಯವಾಗಿದ್ದ ಸಂದರ್ಭದಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಏನೋ ಮೋಸ ನಡೆದಿದೆ. ಹೀಗಾಗಿ, ನಿಮಗೆ ಆಧಾರ್ಕಾರ್ಡ್ ದಾಖಲೆ ನೀಡುವುದಿಲ್ಲ’ ಎಂದು ಫಣಿರಾಜು ಪ್ರತಿಕ್ರಿಯಿಸಿದ್ದಾರೆ. ಬಳಿಕ ರಘು, ನಮ್ಮ ಕಚೇರಿಯಿಂದ ಸಿಮ್ ವಿತರಣೆಯಾಗಿರುವ ಬಗ್ಗೆ ನಮೂದಾಗಿದೆ ಎಂದು ಹೇಳಿ ಕರೆ ಕಡಿತಗೊಳಿಸಿದ್ದಾನೆ.
ಇದನ್ನೂ ಓದಿ ನೀರು ಎಂದು ತಿಳಿದು ಟರ್ಪಂಟೈನ್ ಕುಡಿದ ಮಗು!
ರಜೆ ಸಂದರ್ಭದಲ್ಲಿ ಕಳವು!
ಮಾ.21 ಶನಿವಾರ ಸಿಮ್ ಡೀಆಕ್ಟಿವೇಟ್ ಆಗಿದೆ. ಮರುದಿನ ಮಾ.22 ಭಾನುವಾರ ರಜಾ ದಿನ. ಅಲ್ಲದೇ, ಕರೊನಾ ಭೀತಿ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂಗೆ ಕರೆ ನೀಡಲಾಗಿತ್ತು. ಈ ಅವಧಿಯಲ್ಲಿ ವಂಚನೆ ಆಗಿದೆ. ಕಚೇರಿ ಬಂದ್ ಆಗಿರುವುದನ್ನು ಅರಿತು ವಂಚಕರು ಕೃತ್ಯ ಎಸಗಿದ್ದಾರೆ. ಈ ಕುರಿತು ತನಿಖೆ ಕೈಗೊಳ್ಳಲಾಗುವುದು ಎಂದು ಸೈಬರ್ ಕ್ರೖೆಂ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಏನಿದು ಸಿಮ್ ಕ್ಲೋನಿಂಗ್?
ಮೊಬೈಲ್ ಕಳೆದು ಹೋದ ಸಂದರ್ಭದಲ್ಲಿ ಹಾಗೂ ಅನಧಿಕೃತ ಆಪ್ ಬಳಕೆ ಮಾಡುವ ಗ್ರಾಹಕರ ಫೋನ್ನಿಂದ ಗೌಪ್ಯ ಮಾಹಿತಿಯನ್ನು ಸೈಬರ್ ಕಳ್ಳರು ಕದಿಯುತ್ತಾರೆ. ಅದನ್ನು ಇಟ್ಟುಕೊಂಡು ನಕಲಿ ಸಿಮ್ ಸೃಷ್ಟಿಸಿಕೊಳ್ಳುತ್ತಾರೆ. ಗ್ರಾಹಕರು ಬಳಸುವ ಮೂಲ ಸಿಮ್ ಕಾರ್ಡ್ ನಿಷ್ಕ್ರಿಯಗೊಳಿಸಿ, ಡೂಪ್ಲಿಕೇಟ್ ಸಿಮ್ ಆಕ್ಟಿವೇಟ್ ಮಾಡಿಕೊಳ್ಳುತ್ತಾರೆ. ಇದಕ್ಕೆ ಸಿಮ್ ಕ್ಲೋನಿಂಗ್ ಎನ್ನಲಾಗುತ್ತದೆ.
ಪೊಲೀಸರ ಸಲಹೆ!
ಸಿಸಿಮ್ ಕಾರ್ಡ್ ಯಾರ ಹೆಸರಿನಲ್ಲಿದೆ ಎಂಬ ಮಾಹಿತಿ ಹಂಚಿಕೆ ಬೇಡ
ಆಕಸ್ಮಿಕವಾಗಿ ಸಿಸಿಮ್ ಕಾರ್ಡ್ ನಿಷ್ಕ್ರಿಯವಾದರೆ ಪರಿಶೀಲಿಸಿಕೊಳ್ಳಿ
ಸಿಮ್ ಕಂಪನಿಗೆ ಕರೆ ಮಾಡಿ ವಿಚಾರಿಸಿ
ಫೋನ್ನಲ್ಲಿ ಅನಧಿಕೃತ (3ನೇ ದರ್ಜೆ) ಆಪ್ ಬಳಕೆ ಬೇಡ
ಫೋನ್ ಕಳವಾದರೆ ಸಿಮ್ ಕಾರ್ಡ್ ಡೀ ಆಕ್ಟಿವೇಟ್ ಮಾಡಿಸಿ
ಇಮೇಲ್, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಬದಲಾಯಿಸುವು ಅತ್ಯಗತ್ಯ