ಕಡೂರು: ಕೋಟೆ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರು ರಾಯರ 352ನೇ ವರ್ಷದ ಆರಾಧನಾ ಮಹೋತ್ಸವ ಶುಕ್ರವಾರ ರಾಯರ ಮಧ್ಯಾರಾಧನೆ ಮಹೋತ್ಸವ ಶ್ರದ್ದಾ ಭಕ್ತಿಯೊಂದಿಗೆ ಆಚರಿಸಲಾಯಿತು.
ರಾಯರ ಮೃತ್ತಿಕಾ ಬೃಂದಾವನಕ್ಕೆ ಚಿಕ್ಕಮಗಳೂರಿನ ಅಶ್ವತ್ ನಾರಾಯಣಚಾರ್ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಅಷ್ಟಾವಧಾನ ಸೇವೆ, ಕನಕಾಭಿಷೇಕದೊಂದಿಗೆ ಪೂಜೆ ಸಲ್ಲಿಸಲಾಯಿತು. ಬೃಂದಾವನಕ್ಕೆ ರಾಯರ ಬೆಳ್ಳಿ ಕವಚದ ಜತೆ ವೀಣೆ ಅಲಂಕಾರ ಗಮನ ಸೆಳೆಯಿತು.
ಅಪ್ಪಣ್ಣಾಚಾರ್ಯರು ರಚಿಸಿದ ಶ್ರೀಗುರುಸ್ತೋತ್ರ ಸಾಮೂಹಿಕ ಪಠಣ, ಹಸ್ತೋದಕ ನೆರವೇರಿತು. ಶನಿವಾರ ರಾಯರ ಉತ್ತರಾರಾಧನೆ ಪ್ರಯುಕ್ತ ಸುಜ್ಞಾನೇಂದ್ರ ತೀರ್ಥರ ಆರಾಧನೆ ಹಾಗೂ ಕೋಟೆ ರಥಬೀದಿಗಳಲ್ಲಿ ಪ್ರಲ್ಹಾದರಾಜರ ರಥೋತ್ಸವ ನಡೆಯಲಿದೆ.
ಮಠ ಸಮಿತಿ ಅಧ್ಯಕ್ಷ ಎಚ್.ಜೆ.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ಟಿ.ಆರ್.ಮನು, ಟಿ.ಆರ್.ಪವನ್, ಕೃಷ್ಣಮೂರ್ತಿ ಜೋಷಿ, ಪ್ರದೀಪ್ ಓಂಕಾರ್, ವೆಂಕಟೇಶ್ ಪದಕಿ, ಮಂಜುನಾಥ್ ಗೋಟಾ, ಅರ್ಚಕರಾದ ನಾಗರಾಜ್ ಆಚಾರ್. ಭರತ್ ಇದ್ದರು.