| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರೇಷ್ಮೆ ಎಂದರೆ ಸೀರೆ ಮತ್ತು ಪಂಚೆ ಮಾತ್ರವಲ್ಲ, ರೇಷ್ಮೆ ಗೂಡು, ಹಿಪ್ಪುನೇರಳೆ, ರೇಷ್ಮೆ ಹುಳುಗಳಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಮೂಲಕ ರೈತರ ಆದಾಯ ದುಪ್ಪಟ್ಟು ಮಾಡುವುದರೊಂದಿಗೆ, ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಕರ್ನಾಟಕ ರೇಷ್ಮೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಒಟ್ಟು ಹದಿಮೂರು ಉಪ ಉತ್ಪನ್ನಗಳನ್ನು ಆವಿಷ್ಕಾರ ಮಾಡಿದ್ದು, ಅವುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಖ್ಯಮಂತ್ರಿಗಳ ಸಮಯಕ್ಕಾಗಿ ಎದುರು ನೋಡುತ್ತಿದೆ.
ದೇಶದ ರೇಷ್ಮೆ ಬೆಳೆಯುವ ರಾಜ್ಯಗಳಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದ್ದು, 1.31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿಯಿದೆ. ಅಂದಾಜು 18 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾಗುತ್ತಿದೆ. ಆದರೆ, ಅದರ ಎರಡು ಪಟ್ಟು ತ್ಯಾಜ್ಯ ಉತ್ಪಾದನೆಯಾಗಿ ನಷ್ಟವಾಗುತ್ತಿದೆ. ತ್ಯಾಜ್ಯಕ್ಕೆ ಮೌಲ್ಯವರ್ಧನೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕೆ ಸೂಕ್ತ ವೇದಿಕೆ ಸಿದ್ಧಪಡಿಸುತ್ತಿದೆ.
ಕೆಲ ಜಿಲ್ಲೆಗಳಲ್ಲಿ ವರ್ಷಕ್ಕೆ 12 ಬೆಳೆ ಬೆಳೆದರೆ, ಕೆಲವು ಕಡೆ 8-10 ಬೆಳೆ ಬೆಳೆಯಲಾಗುತ್ತಿದೆ. ಈಗ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಸಿಕ್ಕಿರುವುದರಿಂದ ವಾರ್ಷಿಕ 6-8 ಲಕ್ಷ ರೂ.ಗಳ ಆದಾಯ ರೈತರಿಗೆ ಬರುತ್ತಿದೆ. ಉಪ ಉತ್ಪನ್ನಗಳ ತಯಾರಿಕೆಯಿಂದ ಆದಾಯ 2ರಿಂದ 3 ಪಟ್ಟು ಹೆಚ್ಚಾಗುತ್ತದೆ ಎಂದೇ ಅಂದಾಜಿಸಲಾಗಿದೆ. ರೇಷ್ಮೆಯಿಂದ ಸುಮಾರು 8 ಲಕ್ಷ ಜನ ದುಡಿಮೆ ಕಂಡುಕೊಂಡಿದ್ದಾರೆ. ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಿವೆ. ರೇಷ್ಮೆಯಿಂದ ಈಗ ಕೇವಲ ನೂಲು ತೆಗೆಯುವುದು, ಬಟ್ಟೆ ನೇಯ್ಗೆ ಮತ್ತು ರೇಷ್ಮೆ ಗೂಡಿನ ಹಾರಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ರೇಷ್ಮೆಯ ಮೌಲ್ಯವರ್ಧನೆಯಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲಾಗುತ್ತಿದೆ.
ಮೌಲ್ಯವರ್ಧನೆ ಹಂತಗಳು: ಹಿಪು್ಪನೇರಳೆ ಕಡ್ಡಿ, ಸೊಪು್ಪ, ಹಣ್ಣು, ರೇಷ್ಮೆ ಗೂಡು, ಅದರೊಳಗೆ ಸತ್ತ ಹುಳು, ಹುಳುವಿನ ಹಿಕ್ಕೆ ಹೀಗೆ ಪ್ರತಿಯೊಂದರಿಂದಲೂ ಉಪ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದೆಲ್ಲವನ್ನೂ ಬಳಸಿಕೊಂಡು ರೈತರನ್ನು ಇನ್ನಷ್ಟು ಸಶಕ್ತರನ್ನಾಗಿ ಮಾಡುವುದರ ಜತೆಗೆ ರೇಷ್ಮೆ ಬೆಳೆಯುವ ಪ್ರದೇಶ ಹೆಚ್ಚಳ ಮಾಡಲಾಗುತ್ತದೆ.
ಎರಡು ರೀತಿಯಲ್ಲಿ ನೆರವು: ರೇಷ್ಮೆ ಸಂಶೋಧನಾ ಕೇಂದ್ರ ಯಾವ ಯಾವ ಉತ್ಪನ್ನಗಳನ್ನು ತಯಾರು ಮಾಡಬಹುದು ಎಂಬ ಬಗ್ಗೆ ಸಂಶೋಧನೆ ಮಾಡಿದೆ. ಇಲಾಖೆಯಿಂದ ಉತ್ಪನ್ನಗಳನ್ನು ತಯಾರು ಮಾಡಲು ಮುಂದಾಗುವ ರೈತರಿಗೆ ತಾಂತ್ರಿಕ ನೆರವು ನೀಡುವುದು ಹಾಗೂ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಎಂಬ ಎರಡು ರೀತಿಯ ಚಿಂತನೆ ಮಾಡಲಾಗಿದೆ.
ಎಣ್ಣೆಗೆ ಇದೆ ಬೇಡಿಕೆ: ಸೌಂದರ್ಯವರ್ಧಕಗಳಲ್ಲಿ ಬಳಸುವ ಸೆರಿಸನ್ ಎಣ್ಣೆಗೆ ಪ್ರತಿ ಲೀಟರ್ಗೆ 6000 ರೂ.ಗಳ ದರ ಇದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.
ಮಾರುಕಟ್ಟೆ ವ್ಯವಸ್ಥೆ: ಉಪ ಉತ್ಪನ್ನಗಳನ್ನು ತಯಾರು ಮಾಡಿದರೆ ಸಾಲದು, ಬದಲಾಗಿ ಅದಕ್ಕೆ ಮಾರುಕಟ್ಟೆಯನ್ನು ಒದಗಿಸಬೇಕಾಗುತ್ತದೆ. ಇದಕ್ಕಾಗಿ ರೇಷ್ಮೆ ಇಲಾಖೆ ಹಲವು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸ್ಟಾರ್ಟಪ್ಗಳನ್ನು ಸ್ಥಾಪನೆ ಮಾಡಿ ತಂತ್ರಜ್ಞಾನ ಬಳಸಿಕೊಂಡರೆ, ಕೇಂದ್ರದ ಆರ್ಥಿಕ ನೆರವು ಸಿಗುತ್ತದೆ. ಅಲ್ಲದೆ, ಇ-ಕಾಮರ್ಸ್ ವೇದಿಕೆಯಲ್ಲಿ ಉತ್ಪನ್ನಗಳ ಮಾರಾಟ ಮಾಡುವುದಕ್ಕೆ ಚರ್ಚೆ, ಕೆಎಸ್ಐಸಿ ಮಳಿಗೆಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ. ಕೃಷಿ ಹಾಗೂ ತೋಟಗಾರಿಕೆ ಮೇಳದಲ್ಲಿ ಮಾರಾಟ. ಅಲ್ಲದೇ ರೇಷ್ಮೆ ಇಲಾಖೆಯಿಂದಲೇ ಮೇಳ ನಡೆಸುವುದು ಹೀಗೆ ಮಾರುಕಟ್ಟೆ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.
ರೈತರ ಆದಾಯ ದ್ವಿಗುಣಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ರೇಷ್ಮೆ ಉಪ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿದ್ದು ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇವೆ. ಈ ಉತ್ಪನ್ನಗಳ ಮಾರಾಟದಿಂದ ರೈತರ ಆದಾಯ ಮೂರು ಪಟ್ಟು ಹೆಚ್ಚಾಗುತ್ತದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಬಗ್ಗೆ ಮಾತುಕತೆ ನಡೆದಿವೆ. | ಡಾ. ಕೆ.ಸಿ. ನಾರಾಯಣಗೌಡ ರೇಷ್ಮೆ ಸಚಿವ