ಕೋಲ್ಕತದಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ 20ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಶಿವಮೊಗ್ಗದಲ್ಲಿ ಮೌನ ಮೆರವಣಿಗೆ ನಡೆಸಿದರು. ಕಿರಣ್ ಕುಮಾರ್, ವಾಗ್ದೇವಿ ಬಸವರಾಜ್, ಸೂರ್ಯನಾರಾಯಣ ಉಡುಪ ಇತರರಿದ್ದರು.  
ನ್ಯೂಸ್

ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಕೋಲ್ಕತದಲ್ಲಿ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ರೋಟರಿ ಮತ್ತಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಮೌನ ಮೆರವಣಿಗೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಎಎ ವೃತ್ತದಿಂದ ನೆಹರು ರಸ್ತೆ, ಸೀನಪ್ಪ ಶೆಟ್ಟಿ ವೃತ್ತ, ಬಾಲರಾಜ ಅರಸ್ ರಸ್ತೆ ಮೂಲಕ ಮೌನ ಮೆರವಣಿಗೆ ನಡೆಸಿ ಕಠಿಣ ಕಾನೂನು ಜಾರಿಗೆ ಆಗ್ರಹಿಸಿದರು. ನಗರದ ಎಂಟು ರೋಟರಿ ಕ್ಲಬ್, 5 ಇನ್ನರ್‌ವ್ಹೀಲ್ ಸಂಸ್ಥೆಗಳು, ಒಕ್ಕಲಿಗರ ಮಹಿಳಾ ವೇದಿಕೆ, ಕದಳಿ ಸಮಾಜ, ದೈವಜ್ಞ ಮಹಿಳಾ ಮಂಡಳಿ, ಪ್ರೇರಣಾ ಮಹಿಳಾ ಮಂಡಳಿ, ಭೂಮಿಕಾ ಮಹಿಳಾ ಸಂಘ, ಶರಾವತಿ ಮಹಿಳಾ ಸಂಘ, ಮಹಿಳಾ ಒಕ್ಕಲಿಗರ ಸಂಘ, ಭದ್ರಾವತಿ ತಾಲೂಕು ಮಹಿಳಾ ಒಕ್ಕಲಿಗರ ವೇದಿಕೆ ಮುಂತಾದ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕಿರಣ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಇನ್ನರ್‌ವ್ಹೀಲ್ ಕ್ಲಬ್ಬಿನ ಅಧ್ಯಕ್ಷೆ ವಾಗ್ದೇವಿ ಬಸವರಾಜ್, ಶಿವಮೊಗ್ಗ ಕ್ಲಬ್ಬಿನ ಸೂರ್ಯನಾರಾಯಣ ಉಡುಪ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.