ಚರಕ ಮಹರ್ಷಿಗಳು ಬೋಧಿಸಿದ ಅನೇಕ ಗುಣರಸಾಯನಗಳಲ್ಲಿ ಮೌನವು ಅಂತಿಮವಾದ ರಸಾಯನವು. ‘ಮೌನಂ ಅಭಾಷಣಂ’ಎಂಬ ಅಮರಕೋಶದ ಉಕ್ತಿಯಂತೆ ಮುಖದಿಂದ ಒಂದೂ ಶಬ್ದವನ್ನು ಉಚ್ಚರಿಸದಿರುವುದೇ ಮೌನವು. ಈ ಮೌನವು ಆಕಾರ ಮೌನ ಮತ್ತು ಕಾಷ್ಠಮೌನ ಎಂಬುದಾಗಿ ಎರಡು ಪ್ರಕಾರವಾಗಿರುತ್ತದೆ. ಮುಖದಿಂದ ಶಬ್ದವನ್ನು ಹೊರಗೆಡಹದೇ ಲಿಖಿತ ಅಥವಾ ಕೈಸನ್ನೆಗಳ ಮುಖಾಂತರ ತನ್ನ ಭಾವನೆಗಳನ್ನು ಅಭಿವ್ಯಕ್ತ ಮಾಡುವುದಕ್ಕೆ ಆಕಾರ ಮೌನವೆನ್ನುವರು. ಇನ್ನು ಮನಸ್ಸಿನ ಭಾವನೆಗಳನ್ನು ಹೊರಹಾಕದೇ ಶಾಂತವಾಗಿರುವುದಕ್ಕೆ ಕಾಷ್ಠಮೌನವೆನ್ನುತ್ತಾರೆ. ಪ್ರಕೃತಿಯು ತನ್ನೆಲ್ಲ ವಿಕಾಸವನ್ನು ಈ ಕಾಷ್ಠಮೌನ ದಿಂದಲೇ ಮಾಡುತ್ತದೆ.
ಅದನ್ನೇ ಡಿ.ವಿ.ಜಿ.ಯವರು ‘ಇಳೆಯಿಂದ ಮೊಳಕೆ ಒಗೆವಂದು ತಮಟೆಗಳಿಲ್ಲ| ಫಲಮಾಗುವಂದು ತುತ್ತೂರಿ ದನಿಯಿಲ್ಲ| ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ| ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ||’ ಎಂಬ ಕಗ್ಗದಲ್ಲಿ ಮನುಷ್ಯನಿಗೆ ಪ್ರಕೃತಿಯಂತೆ ಮೌನವಾಗಿ ಕೆಲಸ ಮಾಡುವ ಸಂದೇಶವನ್ನು ಹೇಳಿದ್ದಾರೆ. ಕೇವಲ ವಾಣಿಯನ್ನು ನಿಯಂತ್ರಿಸುವುದಷ್ಟೇ ಮೌನವಲ್ಲ. ನಮ್ಮ ಪ್ರತಿ ಯೊಂದು ಇಂದ್ರಿಯ ಗಳನ್ನು ತಮ್ಮ ತಮ್ಮ ನಿಷಿದ್ಧ ವಿಷಯಗಳಿಂದ ದೂರವಾಗಿರಿಸಿದರೆ ಅದು ಸಕಲೇಂದ್ರಿಯ ಮೌನವೆಂದು ಕರೆಯಲ್ಪ ಡುತ್ತದೆ. ‘ಮೌನಿನಃ ಕಲಹೋ ನಾಸ್ತಿ ಮೌನಂ ಸರ್ವಾರ್ಥಸಾಧನಮ್ ಮುಂತಾದ ಉಕ್ತಿಗಳಲ್ಲಿ ಇಂತಹ ಕಾಷ್ಠಮೌನದಿಂದ ಸಾಧಕನು ಸಕಲ ಕಲಹಗಳಿಂದ ಮುಕ್ತನಾಗಿ ಮುನಿತ್ವದ ಜೊತೆಗೆ ಸರ್ವಾರ್ಥಸಿದ್ಧಿಯನ್ನು ಪಡೆದುಕೊಳ್ಳುತ್ತಾನೆ. ಮನಸ್ಸು ಮೌನ ವಾದರೆ ಅದುವೇ ಅಂತಮುಖದ ಮಹಾಮಾರ್ಗವು. ಬ್ರಹ್ಮಜ್ಞಾನದ ಸಾಧನೆಯು. ಅಂತೆಯೇ ಬ್ರಹ್ಮವನ್ನರಿತವನು ಸುಮ್ಮನಾಗಿರಬೇಕು. ಎಂಬುದಾಗಿ ಹೇಳಲಾಗಿದೆ.
ಅಂತೆಯೇ ಯೋಗಿಗಳುಉಪವಾಸವನ್ನು ಆಚರಿಸುವಂತೆ ಮೌನವನ್ನು ಆಚರಿಸುತ್ತಾರೆ. ಊಟವನ್ನು ಬಿಟ್ಟಾಗ ಹೊಟ್ಟೆ ಸುಧಾರಿಸುವಂತೆ ಮಾತು ಬಿಟ್ಟಾಗ ಮನಸ್ಸು ಸುಧಾರಿಸುವುದು. ಮನಸ್ಸಿನ ವಿಕೃತಿಯೇ ಅನಾರೋಗ್ಯದ ಮೂಲ ಕಾರಣವಾಗಿರುವುದರಿಂದ ಮೌನದಿಂದ ಮನಸ್ಸು ಶಾಂತವಾದಾಗ ಅದೊಂದು ದಿವ್ಯ ರಸಾಯನವಾಗಿ ಮನುಷ್ಯನಿಗೆ ರೋಗ ಬರದಂತೆ ಕಾಪಾಡುತ್ತದೆ. ಅಂತೆಯೇ ಚರಕಮಹರ್ಷಿ ಗಳು ಮೌನವನ್ನು ಕೂಡ ಒಂದು ರಸಾಯನವನ್ನಾಗಿ ಬೋಧಿಸಿದ್ದಾರೆ.