ನ್ಯೂಸ್

ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರೇಮ್ ಸಿಂಗ್ ತಮಾಂಗ್ ಪ್ರಮಾಣವಚನ ಸ್ವೀಕಾರ

ಗ್ಯಾಂಗ್ಟಾಕ್‌: ಸಿಕ್ಕಿಂ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಧ್ಯಕ್ಷ ಪ್ರೇಮ್ ಸಿಂಗ್ ತಮಾಂಗ್ ಅವರು ಇಂದು ( ಸೋಮವಾರ) ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜ್ಯದ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿರುವ ಪಾಲ್ಜೋರ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಲಕ್ಷ್ಮಣ್ ಆಚಾರ್ಯ ಅವರು ತಮಾಂಗ್ ಮತ್ತು ಅವರ ಮಂತ್ರಿ ಮಂಡಳಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.ಸಿಕ್ಕಿಂ ಒಟ್ಟು 32 ಸ್ಥಾನಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 31 ಸ್ಥಾನಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಏರಿದೆ.

2019 ರವರೆಗೆ ಸತತ 25 ವರ್ಷಗಳ ಕಾಲ ರಾಜ್ಯವನ್ನು ಆಳಿದ ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಕೇವಲ ಒಂದು ಸ್ಥಾನವನ್ನು ಗೆದ್ದಿದೆ. ಭದ್ರತಾ ದೃಷ್ಟಿಯಿಂದ ಗ್ಯಾಂಗ್‌ಟಾಕ್‌ನಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಿಗೂ ಅರ್ಧ ದಿನ ರಜೆ ಘೋಷಿಸಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಮತ್ತು ಸಿಕ್ಕಿಂನ ಏಕೈಕ ಲೋಕಸಭೆ ಕ್ಷೇತ್ರದಲ್ಲಿ ಎಸ್‌ಕೆಎಂನ ಪ್ರಚಂಡ ವಿಜಯವನ್ನು ಮುನ್ನಡೆಸಿದ ತಮಾಂಗ್ ಅವರನ್ನು ಜೂನ್ 2 ರಂದು ನಡೆದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆದ ಚುನಾವಣೆಯಲ್ಲಿ 32 ವಿಧಾನಸಭಾ ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಎಸ್‌ಕೆಎಂ ಗೆದ್ದುಕೊಂಡಿದೆ. SKM ನಾಯಕರು ಮತ್ತು ಅದರ ಕಾರ್ಯಕರ್ತರನ್ನು ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ತಮಾಂಗ್ ಶ್ಲಾಘಿಸಿದರು, ಇದು "ಪಕ್ಷಕ್ಕೆ ಭಾರಿ ಚುನಾವಣಾ ಗೆಲುವಿಗೆ ಕಾರಣವಾಯಿತು". ತಮಾಂಗ್ ಅವರು ಸ್ಪರ್ಧಿಸಿದ್ದ ರೆನಾಕ್ ಮತ್ತು ಸೊರೆಂಗ್-ಚಕುಂಗ್ ಕ್ಷೇತ್ರಗಳೆರಡರಿಂದಲೂ ಗೆದ್ದಿದ್ದಾರೆ.