ನ್ಯೂಸ್

ಮತ್ತೊಮ್ಮೆ 'ಬೊಂಬಾಟ್​ ಭೋಜನ' ಬಡಿಸಲು ಬರುತ್ತಿದ್ದಾರೆ ಸಿಹಿಕಹಿ ಚಂದ್ರು

ಬೆಂಗಳೂರು: ಸಿಹಿಕಹಿ ಚಂದ್ರು ನಟನೆ, ನಿರ್ದೇಶನ ಮತ್ತು ನಿರ್ಮಾಣದ ಜತೆಗೆ ಅಡುಗೆ ಮಾಡುವುದರಲ್ಲೂ ಫೇಮಸ್ಸು. ಈಗಾಗಲೇ ಅವರು ಹಲವು ಅಡುಗೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಸ್ಟಾರ್​ ಸುವರ್ಣ ವಾಹಿನಿಗಾಗಿಯೇ 'ಬೊಂಬಾಟ್​ ಭೋಜನ' ಎಂಬ ಕಾರ್ಯಕ್ರಮದ ಎರಡು ಸೀಸನ್​ಗಳನ್ನು ಮಾಡಿಕೊಟ್ಟು, ಅದರಲ್ಲಿ ತರಹೇವಾರಿ ಅಡುಗೆಗಳನ್ನು ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ.

ಈಗ ಅದೇ ಸ್ಟಾರ್​ ಸುವರ್ಣದಲ್ಲಿ ಅವರು 'ಬೊಂಬಾಟ್​ ಭೋಜನ'ದ ಮೂರನೇ ಸೀಸನ್​ ಪ್ರಾರಂಭಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಕಾರ್ಯಕ್ರಮವು ಸೋಮವಾರದಿಂದ ಶನಿವಾರದ ತನಕ ಮಧ್ಯಾಹ್ನ 12ಗಂಟೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದ ಕುರಿತು ಮಾತನಾಡುವ ಅವರು, 'ಸ್ಟಾರ್ ಸುವರ್ಣ ವಾಹಿನಿಯಲ್ಲಿ 2019ರಲ್ಲಿ ಮೊದಲ ಸೀಸನ್ ಶುರು ಮಾಡಿದ್ದೆ. ಈಗ ಎರಡನೇ ಸೀಸನ್ ಕೂಡ ಮುಕ್ತಾಯವಾಗಿ, ಮೂರನೇ ಸೀಸನ್ ಆರಂಭವಾಗಿದೆ. ಈ ಸೀಸನ್ ನಲ್ಲಿ 'ಬಯಲೂಟ', 'ಸವಿಯೂಟ, 'ಮನೆಊಟ', 'ಅಂದ ಚಂದ', 'ಅಂಗೈಯಲ್ಲಿ ಆರೋಗ್ಯ' 'ಟಿಪ್ ಟಿಪ್ ಟಿಪ್' ಹಾಗೂ 'ಅತಿಥಿ ದೇವೋಭವ' ಎಂಬ ಏಳು ಬಗೆಯ ವಿಶೇಷತೆಗಳಿದೆ. ಅದಕ್ಕೆ ಸಂಬಂಧಿಸಿದಂತೆ ಪರಿಣಿತರು ಮಾಹಿತಿ ನೀಡುತ್ತಾರೆ. ಇನ್ನೂ ವಿಶೇಷವೆಂದರೆ ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ.ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ದುಂಡಿರಾಜ್ ಅವರ ಹನಿಗವನ ಒಂದನ್ನು ಹೇಳುತ್ತೇನೆ' ಎಂದು ಹೇಳುತ್ತಾರೆ.

ಈ ಕಾರ್ಯಕ್ರಮದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕಚಿಕ್ಕ ವಿಷಯಗಳಿಗೆ ಆಸ್ಪತ್ರೆಗೆ ಹೋಗುವುದರ ಬದಲು, ಮನೆಯಲ್ಲೇ ಹೇಗೆ ಮದ್ದುಗಳನ್ನು ಮಾಡಬಹುದು ಎಂದು ಡಾ. ಗೌರಿ ಸುಬ್ರಹ್ಮಣ್ಯ ತಿಳಿಸಿಕೊಡುತ್ತಾರೆ.