ನವದೆಹಲಿ: ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಐಸಿಸ್ ಉಗ್ರರು ಇರೋದು ಎಲ್ಲಿ ಗೊತ್ತೆ? ಈ ಬಗ್ಗೆ ವಿಶ್ವ ಸಂಸ್ಥೆ ಅತ್ಯಂತ ಆಘಾತಕಾರಿ ಮಾಹಿತಿ ನೀಡಿದೆ.
ಭಾರತೀಯ ಉಪಖಂಡದಲ್ಲಿ ಕಾರ್ಯಾಚರಿಸುತ್ತಿರುವ ಅಲ್ಕೈದಾ ಸಂಘಟನೆಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಮಯನ್ಮಾರ್ನ 150- 200 ಉಗ್ರರಿದ್ದು, ಈ ಪ್ರದೇಶದಲ್ಲಿ ದಾಳಿಗೆ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಅಲ್ಖೈದಾ, ಐಸಿಸ್ ಹಾಗೂ ಇತರ ಉಗ್ರ ಸಂಘಟನೆಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿರುವ ವಿಶ್ವ ಸಂಸ್ಥೆಯ ತಂಡದ ವಿಶ್ಲೇಷಣಾತ್ಮಕ ವರದಿ ಪ್ರಕಾರ, ಅಫ್ಘಾನಿಸ್ತಾನದ ನಿಮ್ರೂಝ್, ಹೆಲ್ಮಾಂಡ್ ಹಾಗೂ ಕಂದಹಾರ್ ಮೂಲಕ ಭಾರತೀಯ ಉಪಖಂಡದಲ್ಲಿ ತಾಲಿಬಾನಿಗಳ ಅಧೀನದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಭಾರತೀಯ ಉಪ ಖಂಡದಲ್ಲಿ ಕಾರ್ಯಾಚರಿಸುತ್ತಿರುವ ತಂಡದಲ್ಲಿ 150- 200 ಉಗ್ರರಿದ್ದಾರೆ. ಇವರಿಗೆ ಒಸಾಮಾ ಮಹಮೂದ್ ನಾಯಕನಾಗಿದ್ದಾನೆ. ಅಸೀಂ ಉಮರ್ ಬಳಿಕ ಈ ಸ್ಥಾನಕ್ಕೆ ಬಂದಿದ್ದು, ಆತನ ಹತ್ಯೆಯ ಪ್ರತೀಕಾರಕ್ಕೆ ಸಂಚು ರೂಪಿಸುತ್ತಿದ್ದಾನೆ ಎಂದು ತಂಡ ಮಾಹಿತಿ ನೀಡಿದೆ.
ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಯಲ್ಲಿ 180ರಿಂದ 200 ಉಗ್ರರಿದ್ದಾರೆ ಎಂದು ಇತ್ತೀಚೆಗೆ ಐಸಿಸ್ ಹೇಳಿಕೊಂಡಿತ್ತು. ಆತಂಕದ ವಿಚಾರವೆಂದರೆ, ಇವರಲ್ಲಿ ಹೆಚ್ಚಿನವರು ಕರ್ನಾಟಕ ಹಾಗೂ ಕೇರಳದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ ತನ್ನದೊಂದು ಪ್ರಾಂತ್ಯವನ್ನು ರಚಿಸಿರುವುದಾಗಿ ಐಸಿಸ್ ಹೇಳಿಕೊಂಡಿತ್ತು. ಇದಕ್ಕೆ ವಿಲಾಯಾ ಹಿಂದ್ (ಅರೇಬಿಕ್ನಲ್ಲಿ ಭಾರತೀಯ ಪ್ರಾಂತ್ಯ ಎಂದರ್ಥ) ಹೆಸರಿಟ್ಟಿರುವುದಾಗಿ ಘೋಷಿಸಿತ್ತು.
ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ಐಸಿಸ್ ನಡೆಸಿದ್ದ ದಾಳಿಗೆ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ ಹಾಗೂ ಸುತ್ತಲಿನ ಸ್ಥಳದಲ್ಲಿ ಕಾರ್ಯಾಚರಿಸುವ ಖೋರಾಸನ್ ಪ್ರಾಂತ್ಯ ಅಥವಾ ಘಟಕದ ಕೃತ್ಯ ಎಂದು ಹೇಳಲಾಗುತ್ತಿತ್ತು.