ಹೈದರಾಬಾದ್: ಇಂದು ನಸುಕಿನ ಜಾವ ಹೈದರಾಬಾದ್ನ ವಿಪ್ರೋ ಸರ್ಕಲ್ ಬಳಿ ಟಿಪ್ಪರ್ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟೆಕ್ ಮಹೀಂದ್ರಾ ಕಂಪನಿಯ ಉದ್ಯೋಗಿ ಸೇರಿದಂತೆ ಐವರು ದಾರುಣವಾಗಿ ಮೃತಪಟ್ಟಿದ್ದಾರೆ.
ನಸುಕಿನ ಜಾವ 3 ಗಂಟೆ ಸುಮಾರಿಗೆ ಸ್ವಿಫ್ಟ್ ಕಾರು ಹೈದರಾಬಾದ್ನ ಐಐಐಟಿಯಿಂದ ಬರುತ್ತಿತ್ತು. ಗಚಿಬೌಲಿ ಕಡೆ ತೆರಳುವಾಗ ವಿಪ್ರೋ ಸರ್ಕಲ್ ಬಳಿಯಿರುವ ಸಿಗ್ನಲ್ನಲ್ಲಿ ಕೆಂಪು ಬಣ್ಣದ ಎಚ್ಚರಿಕೆ ಸೂಚನೆಯಿದ್ದರೂ ಸಿಗ್ನಲ್ ಕ್ರಾಸ್ ಮಾಡುವಾಗ ಅಪಘಾತ ಸಂಭವಿಸಿದೆ. ಎದುರುಗಡೆಯಿಂದ ಅದೇ ಸಮಯದಲ್ಲಿ ಕೊಕಪೇಟೆಯಿಂದ ಐಐಐಟಿ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ, ಕಾರಿಗೆ ಡಿಕ್ಕಿ ಹೊಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ಸ್ಥಳದಲ್ಲೇ ನಾಲ್ವರು ಮೃತಪಟ್ಟರೆ, ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಮೃತರನ್ನು ಕಾತ್ರಗಡ್ಡ ಸಂತೋಷ್ (25), ಟೆಕ್ ಮಹೀಂದ್ರಾ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಕೊಲ್ಲೂರು ಪವನ್ ಕುಮಾರ್ (24), ಚಿಂತ ಮನೋಹರ್ (23), ಪಪ್ಪು ಭಾರಧ್ವಜ್ (20) ಮತ್ತು ನಾಗಿಸೆಟ್ಟಿ ರೋಶನ್ (23) ಎಂದು ಗುರುತಿಸಲಾಗಿದೆ.
ಘಟನಾ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
(ವಿಡಿಯೋ ಕೃಪೆ: ನ್ಯೂಸ್ ಮೀಟರ್)