ಬೆಂಗಳೂರು: ಶ್ರೀಗುರು ರಾಘವೇಂದ್ರ ಬ್ಯಾಂಕಿನಿಂದ ವಂಚನೆಗೊಳಗಾದ ಸಂತ್ರಸ್ತರು ಪ್ರಧಾನಿ, ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸುವ ಸಲುವಾಗಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸಿದ್ದಾರೆ.
ವಂಚನೆಗೊಳಗಾದ ನೂರಾರು ಷೇರುದಾರರು ಮತ್ತು ಠೇವಣಿದಾರರು ನಗರದ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿರುವ ಬ್ಯಾಂಕಿನ ಮುಂಭಾಗ ಮಂಗಳವಾರ ಜಮಾಯಿಸಿ ಪ್ರತಿಭಟನೆ ನಡೆಸಿ ಬಳಿಕ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಷೇರುದಾರರು ಮತ್ತು ಹಿತರಕ್ಷಣಾ ವೇದಿಕೆಯ ಮುಖ್ಯಸ್ಥ ಡಾ.ಶಂಕರ ಗುಹಾ ದ್ವಾರಕಾನಾಥ್ ಮಾತನಾಡಿ, ಈ ಹಗರಣ ಬೆಳಕಿಗೆ ಬಂದು ಮೂರು ವರ್ಷಗಳಾದರೂ ವಂಚನೆ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಅವರೆಲ್ಲರೂ ಐಷಾರಾಮಿ ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ವಂಚನೆಗೊಳಗಾದ ಷೇರುದಾರರಿಗೆ ಮತ್ತು ಠೇವಣಿದಾರರಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಈ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಶ್ರೀ ಗುರು ರಾಘವೇಂದ್ರ ಬ್ಯಾಂಕ್, ವಸಿಷ್ಠ ಸೌಹಾರ್ದ, ಗುರುಸಾರ್ವಭೌಮ ಸೊಸೈಟಿ, ಕಣ್ವ ಸೊಸೈಟಿ, ನಾಗರತ್ನ ಬ್ಯಾಂಕ್ ಹಾಗೂ ಇನ್ನುಳಿದ ಎಲ್ಲಾ ಸಹಕಾರಿ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಸದ ತೇಜಸ್ವಿ ಸೂರ್ಯ ಅವರನ್ನು ನಾವು ಅತಿಯಾಗಿ ನಂಬಿದ್ದು ತಪ್ಪಾಯಿತೇನೋ, ಅವರಿಂದ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ವಿಧಾನಸಭೆಯಲ್ಲಿ ಸಹಕಾರಿ ಸಚಿವರು ಕೂಡ ಈ ವಿಷಯದಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾದವರ ಸಹಾಯವನ್ನು ಸಂಸದ ತೇಜಸ್ವಿ ಸೂರ್ಯ ಪಡೆದುಕೊಂಡಿರಬಹದು. ಹೀಗಾಗಿಯೇ ಅವರ ಬಗ್ಗೆ ಮೃದುಧೋರಣೆ ತಾಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಅಲ್ಲಿಯವರೆಗೂ ನಿರಂತರವಾಗಿ ಹೋರಾಟ ಮಾಡುತ್ತಲೇ ಇರುತ್ತೇವೆ. ಈ ವಂಚನೆಯಿಂದ ಆಘಾತಕ್ಕೊಳಗಾದ ಸುಮಾರು 150 ಮಂದಿ ಸಂತ್ರಸ್ತ ಠೇವಣಿದಾರರು ಮತ್ತು ಷೇರುದಾರರು ತೀರಿಕೊಂಡಿದ್ದಾರೆ, ಅವರಿಗೆಲ್ಲ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೋ-ಆಪರೇಟಿವ್ ಹಗರಣಗಳಿಂದಾದ ನಷ್ಟ 25,000 ಕೋಟಿ ರೂ. ಒಟ್ಟು 1.8 ಕೋಟಿ ಜನ ಸಂತ್ರಸ್ತರಾಗಿದ್ದಾರೆ. ಅಂದರೆ ಮೂವರಲ್ಲಿ ಒಬ್ಬರಿಗೆ ಸಹಕಾರಿ ಬ್ಯಾಂಕ್‌ಗಳಲ್ಲಿನ ವಂಚನೆಯಿಂದಾಗಿ ವಂಚನೆಯಾಗಿದೆ. ಇದನ್ನು ತಡೆಯಲು ಸರಿಯಾದ ಕಾನೂನು ಇಲ್ಲ. ಸಂಸದ ತೇಜಸ್ವಿ ಈ ಪ್ರಕರಣಲ್ಲಿ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದಲ್ಲಿ ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬಹುದಿತ್ತು. ಆದರೆ ಎಲ್ಲರನ್ನು ದೂರ ಮಾಡಿ, ತಾವೇ ಕ್ರೆಡಿಟ್ ತೆಗೆದುಕೊಳ್ಳಲು ಹೋಗಿ ಜನರನ್ನು ಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಬಹುಶಃ ಅನಂತಕುಮಾರ್ ಅವರು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಹೇಳಿದರು.