ಕಾಂಗ್ರೆಸ್​ ಕಾರ್ಯಕರ್ತರ ಸಭೆ ನಡೆಯುವ ವೇದಿಕೆಯನ್ನು ಶಾಸಕರಾದ ರಮೇಶ್​ಕುಮಾರ್​, ಶ್ರೀನಿವಾಸಗೌಡ, ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​ ಎಂ.ಎಲ್​.ಸಿ.ಗಳಾದ ನಜೀರ್​ ಅಹ್ಮದ್​, ಅನಿಲ್​ಕುಮಾರ್​ ವೀಕ್ಷಣೆ ಮಾಡಿದರು.  
ನ್ಯೂಸ್

ಸಿದ್ದು ಸ್ಪರ್ಧೆಯ ನಿರ್ಧಾರ ಇಂದು ಪ್ರಕಟ; ಕೋಲಾರಕ್ಕೆ ಮಾಜಿ ಮುಖ್ಯಮಂತ್ರಿ ಭೇಟಿ ; ಮಿನಿ ಸ್ಟೇಡಿಯಂನಲ್ಲಿ ರಾಜಕೀಯ ಬಲ ಪ್ರದರ್ಶನ

Kolar

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರ ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಭವ್ಯ ಸ್ವಾಗತಕ್ಕೆ ಸಿದ್ಧರಾಗಿದ್ದು ರಾಜಕೀಯ ಬಲಾಬಲ ಪ್ರದರ್ಶನಕ್ಕೆ ಕೋಲಾರ ಮತ್ತೊಮ್ಮೆ ಸಾಯಾಗಲಿದೆ.

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಕುರಿತಂತೆ ಇಂದು ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ರಾಜ್ಯದ ಕುತೂಹಲ ಸಮಾವೇಶದತ್ತ ಹರಿದಿದೆ.

ನಗರದ ಜೂನಿಯರ್​ ಕಾಲೇಜು ಮೈದಾನದ ಬಳಿಯ ಮಿನಿ ಸ್ಟೇಡಿಯಂನಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದ್ದು ಇದಕ್ಕಾಗಿ ಬೃಹತ್​ ವೇದಿಕೆ ನಿರ್ಮಾಣವಾಗಿದೆ.

ವೇದಿಕೆ ಮುಂಭಾಗ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ ಮುಖಂಡರ ಭಾವಚಿತ್ರಗಳಿರುವ ಬೃಹತ್​ ಕಟೌಟ್​ ರಾರಾಜಿಸುತ್ತಿವೆ.

ಕೆ.ಎಚ್​.ಮುನಿಯಪ್ಪ ಮತ್ತು ಟಬಂಧನ್​ ಮುಖಂಡರ ಒಟ್ಟಿಗೆ ಭಾವಚಿತ್ರಗಳಿರುವ ಕಟೌಟ್​ ಅಳವಡಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಲಾಗಿದೆ.

10 ಸಾವಿರ ಜನಕ್ಕೆ ವ್ಯವಸ್ಥೆ: ಸಮಾವೇಶದ ವೇದಿಕೆ ಬಗ್ಗೆ ವಿಧಾನ ಪರಿಷತ್​ ಸದಸ್ಯ ನಜೀರ್​ ಅಹ್ಮದ್​ ಮಾಹಿತಿ ನೀಡಿ, ನಗರದ ಜೂನಿಯರ್​ ಕಾಲೇಜು ಮೈದಾನದ ಬಳಿಯ ಮಿನಿ ಸ್ಟೇಡಿಯಂನಲ್ಲಿ ಸುಮಾರು 7 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗಿದೆ.

ಸ್ಟೇಡಿಯಂ ಸುತ್ತ ಇರುವ ಪ್ರೇಕ್ಷಕರ ಗ್ಯಾಲರಿ ಸೇರಿದಂತೆ ಆಂದಾಜು 10 ಸಾವಿರ ಜನರು ಸೇರಲು ಅವಕಾಶವಿದೆ. ಇದು ಕೋಲಾರ ತಾಲೂಕಿನ ಕಾಂಗ್ರೆಸ್​ ಕಾರ್ಯಕರ್ತರ ಸಭೆ ಮಾತ್ರ ನಡೆಸಲಾಗುತ್ತದೆ.

ಕಾಂಗ್ರೆಸ್​ ಭವನದಲ್ಲಿ ಸ್ಥಳಾವಕಾಶ ಕಡಿಮೆ ಇರುವ ಕಾರಣ ಮಿನಿ ಸ್ಟೇಡಿಯಂನಲ್ಲಿ ನಡೆಸಲಾಗುತ್ತಿದೆ. ಕೇವಲ ಕೋಲಾರ ತಾಲೂಕಿನ ಕಾರ್ಯಕರ್ತರು ಮಾತ್ರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

23ಕ್ಕೆ ಜಿಲ್ಲಾ ಮಟ್ಟದ ಸಭೆ: ಇದೇ ತಿಂಗಳು 23ರಂದು ಜಿಲ್ಲಾಮಟ್ಟದ ಸಭೆ ಆಯೋಜಿಸಲಾಗಿದೆ. ಆಗ ದೊಡ್ಡಮಟ್ಟದ ಸಭೆ ನಡೆಸಲಾಗುವುದು. ಆ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ ಸೇರಿದಂತೆ ಎಲ್ಲ ರಾಜ್ಯ ನಾಯಕರು ಆಗಮಿಸಲಿದ್ದಾರೆ ವಿಧಾನ ಪರಿಷತ್​ ಸದಸ್ಯ ನಜೀರ್​ ಅಹ್ಮದ್​ ಹೇಳಿದರು.

ಒಗ್ಗಟ್ಟು ಪ್ರದರ್ಶನ: ಕಾಂಗ್ರೆಸ್​ನಲ್ಲಿ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಟ್ಟಾಗಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಕೆ.ಎಚ್​.ಮುನಿಯಪ್ಪ ಮತ್ತು ಅವರ ಬೆಂಬಲಿಗರೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ ಎಂದು ನಜೀರ್​ ಅಹ್ಮದ್​ ತಿಳಿಸಿದರು.

ಪ್ರತಿ ಬೂತ್​ನಿಂದ ಕಾರ್ಯಕರ್ತರು: ಎಂಎಲ್​ಸಿ ಅನಿಲ್​ಕುಮಾರ್​ ಮಾತನಾಡಿ, ಕೋಲಾರ ತಾಲೂಕಿನ 23 ಪಂಚಾಯಿತಿ, ನಗರದ 35 ವಾರ್ಡ್​ ೇತ್ರದ 284 ಬೂತ್​ಗಳಿಂದಲೂ ಸುಮಾರು 25ರಿಂದ 50 ಕಾರ್ಯಕರ್ತರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಲಿದ್ದಾರೆ. ಈಗಾಗಲೇ ಬೂತ್​ಮಟ್ಟದಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ತಿಳಿಸಿದ್ದೇವೆ. ಎಲ್ಲರೂ ಅದಕ್ಕೆ ಸ್ವಾಗತಿಸಿದ್ದಾರೆ ಎಂದರು.

ಎಲ್ಲ ಸಮುದಾಯಗಳ ಬೆಂಬಲ: ಭಾನುವಾರ ರಾತ್ರಿ ಮಾಜಿ ಶಾಸಕ ಶ್ರೀನಿವಾಸಯ್ಯ ಸೇರಿದಂತೆ ಹಲವಾರು ಮುಖಂಡರ ಮನೆಗಳಿಗೆ ಭೇಟಿ ನೀಡಿದ್ದೇವೆ. ಎಲ್ಲಾ ಸಮುದಾಯದವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಸ್ಪರ್ಧೆಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ. ಸೋಮವಾರ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ೂಷಣೆ ಮಾಡಲಿದ್ದಾರೆ ಎಂದು ಅನಿಲ್​ ಕುಮಾರ್​ ತಿಳಿಸಿದರು.

ಎಂಎಲ್​ಸಿ ರಮೇಶ್​ ಸಭೆ: ಎಂ.ಎಲ್​.ಸಿ. ಪಿ.ಆರ್​.ರಮೇಶ್​ ಸಿದ್ದರಾಮಯ್ಯಗೆ ಬೆಂಬಲ ಸೂಚಿಸುವ ಪರವಾಗಿ ಭಾನುವಾರ ವಕ್ಕಲೇರಿ, ವೇಮಗಲ್​, ನರಸಾಪುರ, ಕ್ಯಾಲನೂರು ಭಾಗಗಳಲ್ಲಿ ತಿಗಳ ಸಮುದಾಯದವರ ಮುಖಂಡರ ಸಭೆ ನಡೆಸಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸುವುದರ ಜತೆಗೆ ಅವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿದ್ದಾರೆ.

ಸ್ಟೇಡಿಯಂಗೆ ಭೇಟಿ, ಪರಿಶೀಲನೆ: ಶಾಸಕರಾದ ರಮೇಶ್​ ಕುಮಾರ್​, ಕೆ. ಶ್ರೀನಿವಾಸಗೌಡ,  ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​, ಎಂಎಲ್​ಸಿಗಳಾದ ನಜೀರ್​ ಅಹ್ಮದ್​, ಅನಿಲ್​ಕುಮಾರ್​, ಮುಖಂಡರಾದ ಶ್ರೀಕೃಷ್ಣ, ಸಿ.ಎಂ.ಮುನಿಯಪ್ಪ ಸೇರಿದಂತೆ ಕಾಂಗ್ರೆಸ್​ ಮುಖಂಡರು ಭಾನುವಾರ ರಾತ್ರಿಯೂ ಹಲವು ಸಮುದಾಯಗಳ ಮುಖಂಡರನ್ನು ಭೇಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಮಾವೇಶ ನಡೆಯುವ ಮಿನಿ ಸ್ಟೇಡಿಯಂಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸುವ ನಗರದ ಕ್ಲಾಕ್​ ಟವರ್​, ಬಸ್​ ನಿಲ್ದಾಣ, ಅಮ್ಮವಾರಪೇಟೆ, ಮೆಕ್ಕೇ ವೃತ್ತ ಮಾರ್ಗವಾಗಿ ಬರುವ ರಸ್ತೆಗಳಲ್ಲಿ ಸಿದ್ದರಾಮಯ್ಯನವರಿಗೆ ಸ್ವಾಗತ ಕೋರಿರುವ ಕಟೌಟ್​ಗಳು ರಾಜಾಜಿಸುತ್ತಿವೆ.

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ

ಕೋಲಾರ ನಗರದ ಕನಕ ಮಂದಿರದಲ್ಲಿ ಸಿದ್ದರಾಮಯ್ಯ ಕೋಲಾರ ಭೇಟಿ ಸಂಬಂಧವಾಗಿ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮುಖಂಡ ಚಿಕ್ಕರಾಯಪ್ಪ ಮಾತನಾಡಿದರು. ಮುಖಂಡರಾದ ಶ್ರೀನಿವಾಸ್​, ಅಂಚೆ ಅಶ್ವತ್ಥ, ಕಿಟ್ಟಣ್ಣ, ಕುರಿಗಳ ರಮೇಶ್​, ಕನಕ ಬಾಬು, ಗೋವಿಂದ, ದೀಪು, ಮುನಿಯಪ್ಪ ಮತ್ತಿತರರು ಇದ್ದರು.

ಕೋಲಾರ: ನಗರದ ಮಿನಿ ಕ್ರೀಡಾಂಗಣದಲ್ಲಿ ಜ.9ರಂದು ಆಯೋಜಿಸಿರುವ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಕುರುಬ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಾಜದ ಮುಖಂಡ ಚಿಕ್ಕರಾಯಪ್ಪ ತಿಳಿಸಿದ್ದಾರೆ.

ನಗರದ ಕನಕ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ಕುರುಬ ಸಮಾಜದ ದೊಡ್ಡ ಶಕ್ತಿ. ಅವರಿಗೆ ಜಾತ್ಯತಿತವಾಗಿ ಬೆಂಬಲಿಗರಿದ್ದಾರೆ. ರಾಜ್ಯದ ಅಭಿವೃದ್ಧಿ ಹಾಗೂ ಸಮುದಾಯದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅಂತಹ ವ್ಯಕ್ತಿ ಕೋಲಾರದಿಂದ ಸ್ಪರ್ಧಿಸಬೇಕು ಎಂದು ಸಮುದಾಯದ ಮುಖಂಡರ ಬೇಡಿಕೆಯಾಗಿದೆ ಎಂದರು.

ನಗರಸಭಾ ಮಾಜಿ ಅಧ್ಯಕ್ಷ ಪ್ರಕಾಶ್​, ಮಾಜಿ ಸದಸ್ಯ ಸೋಮಶೇಖರ್​ ಮಾತನಾಡಿದರು.