ಆನವಟ್ಟಿ: ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿ ಗ್ರಂಥ ಮತ್ತು ವಚನ ಸಾಹಿತ್ಯದ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಇವುಗಳನ್ನು ಬೋಧನೆ ಮಾಡುವವರು ಅವರಿಗೆ ಅನುಕೂಲವಾಗುವಂತೆ ಅಭಿಪ್ರಾಯ ಮಂಡಿಸಿದ್ದಾರೆ ಅಷ್ಟೆ. ನಮ್ಮನ್ನು ನಾವು ಅರ್ಥೈಸಿಕೊಳ್ಳವ ಮೂಲಕ ಎಲ್ಲರೂ ಲಿಂಗ ಧರಿಸಬಹುದು ಎಂದು ಬಂಕಸಾಣ ಸಮಾಧಾನ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.
ಬಂಕಸಾಣ ಮಠದ ಆವರಣದಲ್ಲಿ ಸೊರಬ ತಾಲೂಕು ಬೇಡ ಜಂಗಮ ಸಮಾಜ ಹಾಗೂ ಜಂಗಮ ಕ್ಷೇಮಾಭಿವೃದ್ಧಿ ಜನಪರ ಟ್ರಸ್ಟ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಪುರೋಹಿತ ಮಹಾಸಭಾ ಹಾಗೂ ತಾಲೂಕು ಆಡಳಿತ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆದರ್ಶಕ್ಕಾಗಿ ಜೀವನ ನಡೆಸಬೇಕೇ ಹೊರತು ಅವಕಾಶಕ್ಕಾಗಿ ಜೀವನ ನಡೆಸಬಾರದು. ಬದಲಾವಣೆ ಜಗದ ನಿಯಮ. ಇಂದಿನಿಂದಲೇ ಸಂಘಟಿತರಾಗಿ ಉತ್ತಮ ಸಾಮಾಜಿಕ ಬದುಕು ನಡೆಸಿ ಎಂದರು.
ಯಾರಿಗೂ ಒಂದು ಪೈಸೆಯನ್ನೂ ದಾನ ಮಾಡದೆ ಲಕ್ಷಾಂತರ ರೂ. ಆಸ್ತಿ ಮಾಡುವ ತಂದೆ-ತಾಯಿಗಳು, ಮಕ್ಕಳಿಗೆ ನೀವು ಗಳಿಸಿರುವ ಸಂಪತ್ತನ್ನು ಉಳಿಸಿಕೊಂಡು ಹೋಗಲು ಸಂಸ್ಕಾರ, ವಿದ್ಯೆ, ಸಜ್ಜನಿಕೆ ಗುಣಗಳನ್ನು ಕಲಿಸದಿದ್ದರೆ ನೀವು ಗಳಿಸಿರುವ ಸಂಪತ್ತನ್ನು ಹಾಳು ಮಾಡಿ ನಿಮ್ಮನ್ನು ಬೀದಿಯಲ್ಲಿ ನಿಲ್ಲಿಸುತ್ತಾರೆ. ಹಾಗೆ ಆಗಬಾರದು ಎಂದರೆ ಸಂಸ್ಕಾರ ನೀಡುವ ಕಡೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದರು.
ತಾಂತ್ರಿಕ ತಜ್ಞ ವಾಗೀಶ್ ಪಾಟೀಲ್, ನಿವೃತ್ತ ಪ್ರಾಚಾರ್ಯ ಎಚ್.ಬಿ.ಪಂಚಾಕ್ಷಯ್ಯ, ಹಿರಿಯ ವಕೀಲ ಎಂ.ಆರ್.ಪಾಟೀಲ್ ಮಾತನಾಡಿದರು. ಹಿರೇಮಾಗಡಿ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕೆಂಪಿನ ವೃಷಭೇಂದ್ರ ಸ್ವಾಮೀಜಿ, ಅಬಲೂರು ಚರಂತಿಮಠದ ಶ್ರೀ ಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಟ್ರಸ್ಟ್ ಅಧ್ಯಕ್ಷ ವಿಜೇಂದ್ರ ಸ್ವಾಮಿ, ಅಶೋಕ್ ನಾಯಕ್, ಕೊಟ್ರೇಶ್ ಸ್ವಾಮಿ, ಪಂಚಾಕ್ಷರ ಗೌಡ, ಬಸವರಾಜ, ಶಿವಯೋಗಿ ಸ್ವಾಮಿ, ಬಸವರಾಜ ಅಗಸನಹಳ್ಳಿ, ಪ್ರಭು ಸ್ವಾಮಿ, ಮಹೇಶ್ ಸ್ವಾಮಿ, ಅಕ್ಕನ ಬಳಗದ ರೇಖಾ ಜಗದೀಶ್, ರೇಣುಕಮ್ಮ ಗೌಳಿ, ಗೀತಾ ಭೋಜರಾಜ್, ಗಂಗಾಧರ ಸ್ವಾಮಿ ಇದ್ದರು.