ಶ್ರೀ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷರು ಸಿದ್ಧಗಂಗಾ ಮಠ  
ನ್ಯೂಸ್

ನಾಳೆಯಿಂದ ಸಿದ್ಧಗಂಗೆ ಜಾತ್ರೆ; ಜಿಲ್ಲೆಯಲ್ಲಿ ಚರ್ಮಗಂಟು ರೋಗ ಆತಂಕ ದನಗಳ ಪರಿಷೆ ಇಲ್ಲ

ತುಮಕೂರು: ಸಿದ್ಧಗಂಗಾ ಕ್ಷೇತ್ರದ ಆರಾಧ್ಯದೈವ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.8 ರಿಂದ 22ರವರೆಗೆ ನಡೆಯಲಿದೆ. ಈ ಬಾರಿ ರಾಸುಗಳಿಗೆ ಚರ್ಮಗಂಟು ರೋಗ ಕಾಡುತ್ತಿರುವ ಹಿನ್ನೆಲೆಯಲ್ಲಿ ದನಗಳ ಪರಿಷೆಯನ್ನು ಕೈಬಿಡಲಾಗಿದೆಯಾದರೂ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಎಂದಿನಂತೆ ನಡೆಯಲಿದೆ. ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಜರುಗಲಿರುವ ಜಾತ್ರೆಯಲ್ಲಿ ಫೆ.12 ರಿಂದ 21ರವರೆಗೂ ಸ್ವಾಮಿಯ ಉತ್ಸವ ನಡೆಯಲಿದೆ.

ಮಹಾಶಿವರಾತ್ರಿ ಮರುದಿನ ಫೆ.19ರಂದು ಸಿದ್ದಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಜರುಗಲಿದೆ. 20ರಂದು ಬೆಳ್ಳಿಪಲ್ಲಕ್ಕಿ ಉತ್ಸವ ಹಾಗೂ 21ರಂದು ತೆಪ್ಪೋತ್ಸವ, ಪಂಚಬ್ರಹ್ಮೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. ಫೆ.12 ರಂದು ಗೋಸಲ ಸಿದ್ದೇಶ್ವರ ಸ್ವಾಮಿ ಉತ್ಸವ, ಶೂನ್ಯ ಸಿಂಹಾಸನಾರೋಹಣೋತ್ಸವ ಮತ್ತು ವೃಷಭವಾಹನ, 13ರಂದು ನಂದಿವಾಹನ, ಗಜವಾಹನ, 14ರಂದು ಹುಲಿವಾಹನ, ಸಿಂಹವಾಹನ, 15 ರಂದು ಹುತ್ತದವಾಹನ, ಶೇಷವಾಹನ, 16ರಂದು ಅಶ್ವವಾಹನ, ನವಿಲುವಾಹನ, 17ರಂದು ರಾವಣವಾಹನ, ಬಿಲ್ವವೃಕ್ಷವಾಹನ, ನವರಂಗಪಲ್ಲಕ್ಕಿ ಉತ್ಸವ, 18ರಂದು ಮಹಾಶಿವರಾತ್ರಿ ಪೂಜೆ, ಬೆಳ್ಳಿರಥೋತ್ಸವ ನಡೆಯಲಿವೆ.

ಕೃಷಿ-ಕೈಗಾರಿಕಾ ವಸ್ತು ಪ್ರದರ್ಶನ: ಸಿದ್ದಲಿಂಗೇಶ್ವರ ಸ್ವಾಮಿ ಉತ್ಸವದ ಅಂಗವಾಗಿ ಫೆ.8 ರಿಂದ 22ರವರೆಗೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಡೆಯಲಿದೆ. 59 ವರ್ಷಗಳಿಂದ ವಸ್ತು ಪ್ರದರ್ಶನ ಆಯೋಜಿಸಲಾಗುತ್ತಿದ್ದು ವಿವಿಧ ಇಲಾಖೆಗಳು ಸರ್ಕಾರದ ಪ್ರಗತಿಪರ ಯೋಜನೆ, ಸೌಲಭ್ಯಗಳನ್ನು ಜನರಿಗೆ ಪರಿಚಯಿಸಲಾಗುವುದು. ಜತೆಗೆ ಮುಖ್ಯವೇದಿಕೆಯಲ್ಲಿ ಪ್ರತಿನಿತ್ಯ ನಾಟಕ, ಮನರಂಜನೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾರ್ಯದರ್ಶಿ ಬಿ.ಗಂಗಾಧರಯ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರತೀವರ್ಷದಂತೆ ದನಗಳ ಪರಿಷೆಯನ್ನು ಈ ವರ್ಷವೂ ನಡೆಸಲು ತೀರ್ಮಾನಿಸಲಾಗಿತ್ತು. ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಡುತ್ತಿದ್ದು, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ನಿರ್ದೇಶನದಂತೆ ಈ ಬಾರಿ ಜಾನುವಾರು ಜಾತ್ರೆ ಕೈಬಿಡಲಾಗಿದೆ. ರೈತ ಬಾಂಧವರು ಸಹಕರಿಸಬೇಕು. | ಶ್ರೀ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷರು ಸಿದ್ಧಗಂಗಾ ಮಠ