ನ್ಯೂಸ್

ಜ್ಞಾನ ದಾಸೋಹಿ ಸಂತ 'ಸಿದ್ದೇಶ್ವರ ಶ್ರೀ' ಅಸ್ತಂಗತ

Bengaluru - General - Rama Kishan K V

ವಿಜಯಪುರ: ಈ ಶತಮಾನದ ನಡೆದಾಡುವ ದೇವರು, ಮಹಾನ್​ ಸಂತ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀ(82)ಗಳು ಸೋಮವಾರ ಸಂಜೆ 6.05 ನಿಮಿಷದ ವೇಳೆಗೆ ಇಹಲೋಕ ಪಯಣ ಮುಗಿಸಿ, ಶಿವೈಕ್ಯರಾಗಿದ್ದಾರೆ.

ಜ್ಞಾನಾಯೋಗಾಶ್ರಮದಲ್ಲಿ ಕಳೆದೊಂದು ತಿಂಗಳಿನಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ವಯೋಸಹಜವಾಗಿ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ.

ಶಾಂತತೆಯೇ ಮೂರ್ತಿವೆತ್ತಂತೆ ಸ್ಥಿತ ಪ್ರಜ್ಞತ್ವದಿಂದ, ಸರಳವಾದ ನಡೆನುಡಿಯಿಂದ ಕೋಟ್ಯಂತರ ಭಕ್ತರ ಮನದಲ್ಲಿ ಶಾಶ್ವತ ಸ್ಥಾನಪಡೆದಿರುವ ವಿರಾಗಿ ಜ್ಞಾನಯೋಗಾಶ್ರಮ ಸಿದ್ಧೇಶ್ವರ ಶ್ರೀಗಳು, ಆಧ್ಯಾತ್ಮ, ವೇದಾಂತವನ್ನು ದೃಷ್ಟಾಂತಗಳ ಮೂಲಕ ಎಳೆಎಳೆಯಾಗಿ ಬಿಡಿಸಿ ಹೇಳುತ್ತಿದ್ದರು. ಸಿದ್ಧೇಶ್ವರ ಶ್ರೀಗಳು, ವಿಶ್ವಾದ್ಯಂತ ಇರುವ ಒಳ್ಳೆಯ ಅಂಶಗಳನ್ನೆಲ್ಲಾ ಒಟ್ಟುಗೂಡಿಸಿ ಅದನ್ನು ಸರಳವಾಗಿ ಅರ್ಥೈಸುವಂತೆ ತಮ್ಮ ಪ್ರವಚನಗಳಲ್ಲಿ ವಿವರಿಸುತ್ತಿದ್ದರು.

ವಿಶ್ವಾದ್ಯಂತ ಅಸಂಖ್ಯಾತ ಭಕ್ತವೃಂದವನ್ನು ಹೊಂದಿರುವ ಶ್ರೀಗಳು, ಸುತ್ತಲಿನ ಪರಿಸರವನ್ನು ಆರಾಧಿಸುವ ಮೂಲಕ ಬದುಕನ್ನು ಅರಿತುಕೊಂಡು, ದೇವನ ಅಸ್ತಿತ್ವವನ್ನು ಅರ್ಥೈಸಿಕೊಂಡು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ಸರಳವಾಗಿ ಪ್ರವಚನಗಳಲ್ಲಿ ಪ್ರಸ್ತುತಪಡಿಸುವುದು ಭಕ್ತರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿದೆ.