ನ್ಯೂಸ್

26ಕ್ಕೆ ಸಿದ್ದರಾಮೇಶ್ವರ ಶೈಕ್ಷಣಿಕ ಕಟ್ಟಡ ಉದ್ಘಾಟನೆ

Shivamogga

ಶಿವಮೊಗ್ಗ: ನಂದಿ ವಿದ್ಯಾಸಂಸ್ಥೆಯಿಂದ ಸೋಮಿನಕೊಪ್ಪ ರಸ್ತೆಯ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಗುರು ಸಿದ್ದರಾಮೇಶ್ವರ ಶೈಕ್ಷಣಿಕ ಕಟ್ಟಡದ ಉದ್ಘಾಟನಾ ಸಮಾರಂಭ ನ.26ರಂದು ಬೆಳಗ್ಗೆ 10.30ಕ್ಕೆ ನೆರವೇರಲಿದೆ ಎಂದು ವಿದ್ಯಾಸಂಸ್ಥೆಯ ನಿರ್ದೇಶಕ ಎ.ಬಸವರಾಜ ತಿಳಿಸಿದರು.

2.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಟ್ಟಡ ಉದ್ಘಾಟಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ವಸತಿ ಶಾಲೆಗೆ ಕಟ್ಟಡವನ್ನು ಬಾಡಿಗೆಗೆ ನೀಡಿದ್ದು 6ರಿಂದ ಎಸ್ಸೆಸ್ಸೆಲ್ಸಿವರೆಗಿನ 200 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಮೂರು ವರ್ಷದ ಅವಧಿಗೆ ಬಾಡಿಗೆಗೆ ನೀಡಿದ್ದು ಆನಂತರ ಇದೇ ಕಟ್ಟಡದಲ್ಲಿ ನಂದಿ ವಿದ್ಯಾಸಂಸ್ಥೆಯಿಂದ ಕಾಲೇಜು ಸ್ಥಾಪಿಸುವ ಆಲೋಚನೆ ಹೊಂದಿದ್ದೇವೆ ಎಂದು ಹೇಳಿದರು.

ಶಾಸಕ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಎಂಎಲ್‌ಸಿಗಳಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಮುಖ್ಯ ಅತಿಥಿಯಾಗಿರುವರು. ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಡಿ.ಬಿ.ಗಂಗಪ್ಪ, ಮೇಯರ್ ಎಸ್.ಶಿವಕುಮಾರ್, ಶ್ರೀ ಬಸವೇಶ್ವರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಮಾಜಿ ಅಧ್ಯಕ್ಷ ಎನ್.ಜೆ.ರಾಜಶೇಖರ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಪಾಲಿಕೆ ಸದಸ್ಯೆ ಆಶಾ ಚಂದ್ರಪ್ಪ ಉಪಸ್ಥಿತರಿರುವರು.  ಕಟ್ಟಡಕ್ಕೆ ತಲಾ 50 ಸಾವಿರ ರೂ. ದಾನ ನೀಡಿದ 30ಕ್ಕೂ ಅಧಿಕ ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಈಶ್ವರ ಎಣ್ಣೇರ, ಕಾರ್ಯದರ್ಶಿ ಎಚ್.ಷಣ್ಮುಖಪ್ಪ, ಸಂಘಟನಾ ಕಾರ್ಯದರ್ಶಿ ಡಾ. ಎಚ್.ಬಿ.ಸುರೇಶ್, ನಿರ್ದೇಶಕರಾದ ಎ.ಶಿವಮೂರ್ತಿ, ವಿ.ನಟರಾಜ, ಎಸ್.ಬಿ.ಜಯಶಂಕರ್, ಸೋಮಸುಂದರ್ ಸುದ್ದಿಗೋಷ್ಠಿಯಲ್ಲಿದ್ದರು.