ನ್ಯೂಸ್

ಮಾಮ ಮಾಮ ಎನ್ನುತ್ತಿದ್ದ: ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ

| ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ

ಡಾ. ರಾಜಕುಮಾರ್ ಅವರಿಗೆ ನನ್ನ ಕಂಡರೆ ಎಲ್ಲಿಲ್ಲದ ಅಕ್ಕರೆ, ಯಾವಾಗಲೂ ನಮ್ಮ ಕಾಡಿನವರು ಎಂದೇ ಕರೆಯುತ್ತಿದ್ದರು. ಅವರೊಂದಿಗಿನ ಒಡನಾಟ ಅವರ ಇಡೀ ಕುಟುಂಬದೊಂದಿಗೆ ಈಗಲೂ ಮುಂದುವರಿದಿದೆ. ಅದರಲ್ಲೂ ಚಿಕ್ಕ ವಯಸ್ಸಿನಿಂದ ನೋಡುತ್ತಿದ್ದ ಪುನೀತ್ ರಾಜಕುಮಾರ್, ಯಾವಾಗ ಸಿಕ್ಕರೂ ಕಾಲಿಗೆ ಬಿದ್ದು ‘ಮಾಮ, ಮಾಮ’ ಎಂದೇ ಕರೆಯುತ್ತಿದ್ದರು. ಹಿರಿಯರಿಗೆ ಗೌರವ ನೀಡುವುದು, ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಬೆರೆಯುವುದನ್ನು ಅವರ ತಂದೆ ರಾಜಕುಮಾರ್ ಅವರಿಂದ ರೂಢಿಸಿಕೊಂಡು ಬಂದಿದ್ದರು. ರಾಜಕುಮಾರ್ ಅವರಲ್ಲಿದ್ದ ಅನೇಕ ಗುಣಗಳನ್ನು ಪುನೀತ್ ಅವರಲ್ಲಿ ನಾನು ಮೊದಲಿನಿಂದಲೂ ಕಂಡಿದ್ದೇನೆ.

ಪುನೀತ್ ಯಾವುದೇ ಸಿನಿಮಾ ಬಿಡುಗಡೆಯಾದರೂ ಬಂದು ನೋಡುವಂತೆ ಆಹ್ವಾನ ನೀಡುತ್ತಿದ್ದರು. ಅವರ ರಾಜಕುಮಾರ ಸಿನಿಮಾವನ್ನು ನಾನು ಮೈಸೂರಿನಲ್ಲಿ ನೋಡಿದ್ದೆ, ಭಾವೋದ್ವೇಗಕ್ಕೂ ಒಳಗಾಗಿದ್ದೆ. ರಾಜಕುಮಾರ್ ಅವರ ಕಸ್ತೂರಿ ನಿವಾಸದ ಮನೋಜ್ಞ ಅಭಿನಯವನ್ನು ರಾಜಕುಮಾರ ಸಿನಿಮಾದ ಮೂಲಕ ಪುನೀತ್ ಅವರಲ್ಲಿ ಕಂಡಿದ್ದೆ. ನಾನು ಸಿನಿಮಾ ನೋಡಿದ ಸುದ್ದಿ ಮಾಧ್ಯಮಗಳಲ್ಲಿ ನೋಡಿದ ಪುನೀತ್, ಕರೆ ಮಾಡಿ ಸಿನಿಮಾ ಬಗ್ಗೆ ಹಾಗೂ ಅವರ ಅಭಿನಯದ ಬಗ್ಗೆ ಚರ್ಚೆ ನಡೆಸಿ, ಸಂತಸ ಹಂಚಿಕೊಂಡಿದ್ದರು.

ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಆಗಾಗ ಭೇಟಿ ಮಾಡಿದ್ದಾರೆ. ಪ್ರತಿ ಭೇಟಿಯಲ್ಲಿಯೂ ಸಿನಿಮಾರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ, ವೈಯಕ್ತಿಕವಾಗಿ ಯಾವುದೇ ಬೇಡಿಕೆಯನ್ನು ಅವರು ಇಡಲಿಲ್ಲ. ರಾಜಕುಮಾರ್ ಐಎಎಸ್ ಅಕಾಡೆಮಿ ಉದ್ಘಾಟನೆಗೂ ನನ್ನನ್ನು ಆಹ್ವಾನಿಸಿದ್ದರು. ಸದಾ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ತುಡಿಯುತ್ತಿದ್ದರು. ಅವರ ಅನೇಕ ಸಮಾಜಮುಖಿ ಸೇವಾ ಕಾರ್ಯಗಳ ಬಗ್ಗೆ ಹೇಳಿದ್ದರು. ಒಬ್ಬ ನಟರಾಗಿ ಸಮಾಜದ ಬಗ್ಗೆ ತುಳಿತಕ್ಕೆ ಒಳಗಾದವರ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಸದಾ ಮೆಚ್ಚಿಕೊಂಡಿದ್ದೇನೆ. ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕು ಎಂಬ ಮನಸ್ಥಿತಿ ಪುನೀತ್​ರಲ್ಲಿ ಇದ್ದದ್ದನ್ನು ಗಮನಿಸಿದ್ದೇನೆ. ಅದರ ಬಗ್ಗೆ ಹೆಮ್ಮೆಯಾಗುತ್ತದೆ. ನಾನು ಥಿಯೇಟರ್​ಗೆ ಹೋಗಿ ನೋಡಲಾಗದಿದ್ದರೂ ಟಿವಿಯಲ್ಲಿ ಬಹುತೇಕ ಅವರ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಅವರ ಸಿನಿಮಾಗಳಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶಗಳಿರುವುದನ್ನು ಗಮನಿಸಬಹುದು. ಒಬ್ಬ ನಟರಿಗೆ ಇರಬೇಕಾಗಿರುವ ಬದ್ಧತೆ ಇದಾಗಿದೆ.

ಸಲಗ ಸಿನಿಮಾ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದೆ. ಅಲ್ಲೂ ಪುನೀತ್ ಅದೇ ಪ್ರೀತಿಯಿಂದ ಮಾತನಾಡಿಸಿದ್ದರು. ಅದೇ ಅವರ ಕೊನೆಯ ಭೇಟಿಯಾಗುತ್ತದೆ ಎನಿಸಿರಲಿಲ್ಲ. ಸದಾ ಸರಳ, ಸಜ್ಜನಿಕಯ ನಡವಳಿಕೆ ರೂಢಿಸಿಕೊಂಡಿದ್ದರು. ಪ್ರತಿಭಾವಂತ ಯುವ ನಟನನ್ನು ಕಳೆದುಕೊಂಡಿರುವುದು ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ.

ಪುನೀತ್ ರಾಜ್​ಕುಮಾರ್ ಭೇಟಿ ಕೊಟ್ಟಾಗಲೆಲ್ಲ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ತಮಿಳುನಾಡಿನ ಈರೋಡ್

ಜಿಲ್ಲೆಯಲ್ಲಿರá-ವ ಮೇರುನಟ ಡಾ.ರಾಜ್​ಕುಮಾರ್ ಹುಟ್ಟೂರು ದೊಡ್ಡಗಾಜನೂರಿನ ‘ದೊಡ್ಮನೆ’ಯಲ್ಲಿ ಸೂತಕ ಆವರಿಸಿತ್ತು. ಸಾವಿನ ಸುದ್ದಿ ಕೇಳಿ ಓಡೋಡಿ ಬಂದವರ ಗಂಟಲಲ್ಲಿ ದುಃಖ, ಸಂಕಟ ಸಿಕ್ಕಿಕೊಂಡು ಕೊರಳುಬ್ಬಿತ್ತು... ಮಾತು ಆರಂಭಿಸುವವರ ಬಾಯಿಯಿಂದ ಹೊರ ಹೊಮ್ಮುವ ಸ್ವರದೊಂದಿಗೆ ಕಣ್ಣೀರು ಸ್ಪರ್ಧೆಗಿಳಿದಿತ್ತು..! ‘ಇಷ್ಟು ದಿನ ಪುನೀತ್ ಬಂದಾಗ ಅವರನ್ನು ನೋಡಲು ಇಲ್ಲಿ ಸೇರುತ್ತಿದ್ದೆವು. ಆದರೀಗ ಇಂತಹ ಪರಿಸ್ಥಿತಿಗೆ ಬಂದು ನಿಲ್ಲುತ್ತೇವೆ ಎಂದುಕೊಂಡಿರಲಿಲ್ಲ. ಇಷ್ಟು ಬೇಗ ಅವರು ನಮ್ಮನ್ನು ಬಿಟ್ಟು ಹೋಗಬಾರದಿತ್ತು’ ಎಂದು ಸ್ಥಳೀಯರು ಕಣ್ಣೀರಾದರು.

ಶಕ್ತಿಧಾಮದಲ್ಲಿ ನೀರವ ಮೌನ...

ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಶೋಷಿತ ಮಹಿಳೆಯರ ಪುನರ್ವಸತಿ ಕೇಂದ್ರವಾದ ‘ಶಕ್ತಿಧಾಮ’ ಅಭಿವೃದ್ಧಿಗೆ ಪುನೀತ್ ಹೆಗಲು ಕೊಟ್ಟಿದ್ದರು. ಅವರ ನಿಧನದ ಬಳಿಕ ಅಲ್ಲಿ ನೀರವ ಮೌನ ಆವರಿಸಿದೆ. ವೇಶ್ಯಾವೃತ್ತಿಗೆ ಬಲವಂತವಾಗಿ ನೂಕಲ್ಪಟ್ಟ ಮಹಿಳೆಯರು, ಮನೆಯಿಂದ ಹೊರಹಾಕಲ್ಪಟ್ಟ ಹೆಂಗಸರು, ಶೋಷಣೆಗೆ ಅಥವಾ ಲೈಂಗಿಕ ಕಿರುಕುಳಕ್ಕೆ ಒಳಗಾದ ಯುವತಿಯರು, ಮನೆ ಕಳೆದುಕೊಂಡ ಮಹಿಳೆಯರಿಗೆ 2018ರ ಮಾ.9ರಂದು 5 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಶಕ್ತಿಧಾಮದಲ್ಲಿ ನೆಲೆ ಕಲ್ಪಿಸಲಾಗುತ್ತದೆ. ಈಗಾಗಲೆ ಸಾವಿರಾರು ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಸಂಸ್ಥೆಯ ಸ್ಥಾಪನೆಗೆ ಡಾ.ರಾಜ್​ಕುಮಾರ್ ನೆರವಾದರು. ಬಳಿಕ ಪಾರ್ವತಮ್ಮ ರಾಜ್​ಕುಮಾರ್, ನಟ ಪುನಿತ್​ರಾಜ್​ಕುಮಾರ್ ಪೋಷಣೆ ಮಾಡಿದ್ದರು.

ಫಿಟ್ ಆಗಿದ್ದ ಪುನೀತ್ ಸಾವಿಗೆ ಕಾರಣವೇನು?

ಫಿಟ್ ಆಂಡ್ ಫೈನ್ ಆಗಿದ್ದ ಪುನೀತ್​ಗೆ ಹೃದಯಾಘಾತ ವಾಗಲು ಕಾರಣವೇನು? ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ. ಅತಿಯಾದ ಜಿಮ್ ವರ್ಕ್​ಔಟ್ ಅಥವಾ ಕೌಟುಂಬಿಕ ಹಿನ್ನೆಲೆಯಿಂದ ಹೃದಯಾಘಾತವಾಯಿತಾ? ಎಂಬ ಮಾತು ಕೇಳಿಬಂದಿವೆ. ಆರೋಗ್ಯವಾಗಿದ್ದ ಅಪು್ಪ ಹೃದಯಾಘಾತದಿಂದ ಜೀವ ಕಳೆದುಕೊಂಡಿದ್ದು ಹೇಗೆ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿದೆ. ಜಾಲತಾಣಗಳಲ್ಲಿ ಜಿಮ್ಲ್ಲಿ ವರ್ಕ್​ಔಟ್ ಮಾಡಿ ಮೃತಪಟ್ಟ ಘಟನೆಗಳನ್ನು ಶೇರ್ ಮಾಡುವ ಮೂಲಕ ಪುನೀತ್ ಸಾವಿಗೆ ಅತಿಯಾದ ವರ್ಕ್​ಔಟ್ ಕಾರಣವಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಪುನೀತ್ ಹೃದಯಾಘಾತಕ್ಕೆ ಅವರ ಕೌಟುಂಬಿಕ ಹಿನ್ನೆಲೆಯೂ ಕಾರಣವಿರಬಹುದು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಹೃದಯಾಘಾತಕ್ಕೆ ವರ್ಕ್​ಔಟ್ ಮಾತ್ರವೇ ಕಾರಣವಾಗುವುದಿಲ್ಲ. ಹೃದಯಾಘಾತಕ್ಕೆ ಒಳಗಾಗುವ ಶೇ.15 ಜನರಲ್ಲಿ ಕುಟುಂಬದ ಹಿನ್ನೆಲೆಯೂ ಕಾರಣವಾಗಿರುತ್ತದೆ. ಅತಿಯಾದ ವರ್ಕ್​ಔಟ್ ಪ್ರಮುಖ ಕಾರಣ ಎಂದು ಹೇಳಲಾಗದು. ಅದೃಷ್ಟ ಇಲ್ಲದವರಿಗೆ ಕೆಲವೇ ನಿಮಿಷಗಳಲ್ಲಿ ಹೃದಯ ನಿಂತು ಹೋಗುತ್ತದೆ. ಅಂತಹವರಿಗೆ ಆಸ್ಪತ್ರೆಗೆ ಹೋಗುವಷ್ಟು ಸಮಯ ಇರುವುದಿಲ್ಲ. ಹೃದಯಾಘಾತ ಆಗುವುದಾದರೆ ಹಂತಹಂತವಾಗಿ ಎದೆ ಉರಿ, ಎದೆ ನೋವು ಮತ್ತಿತರ ಲಕ್ಷಣಗಳು ಮುನ್ಸೂಚನೆಯಾಗಿ ಕಾಣಿಸಿಕೊಳ್ಳುತ್ತದೆ. ಆದರೆ, ಕೆಲವರಲ್ಲಿ ರಕ್ತನಾಳ ಸಾಮಾನ್ಯವಾಗಿಯೇ ಇರುತ್ತದೆ. ಹೃದಯಾಘಾತವಾದಾಗ ದಿಢೀರ್ ಹೃದಯದ ಕ್ಲಾಕ್ (ಟ್ಝಚಟ್ಠಿಛಿ) ಒಡೆದು ಕೆಲವೇ ನಿಮಿಷದಲ್ಲಿ ರಕ್ತನಾಳದಲ್ಲಿ ರಕ್ತ ಹೆಪು್ಪ ಗಟ್ಟುತ್ತದೆ. ಇಂತಹವರಿಗೆ ಯಾವುದೇ ಮುನ್ಸೂಚನೆ ಇರುವುದಿಲ್ಲ. ಹೃದಯಾಘಾತ ಆದವರಲ್ಲಿ ಶೇ. 90 ಮಂದಿಗೆ ಚಿಕಿತ್ಸೆಗೆ ಸಮಯ ಸಿಗುತ್ತದೆ. ಶೇ.10 ಮಂದಿಗೆ ಯಾವುದೇ ಸಮಯ ಸಿಗುವುದಿಲ್ಲ. ಹಾಗಾಗಿ ಹೃದಯಘಾತ ಕುಟುಂಬದ ಹಿನ್ನೆಲೆ ಹೊಂದಿದ್ದಲ್ಲಿ ಪ್ರತಿ ವರ್ಷ ಮುನ್ನೆಚ್ಚರಿಕೆಯಾಗಿ ಹೃದಯದ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎನ್ನುತ್ತಾರೆ ಮಂಜುನಾಥ್. ಕುಟುಂಬದ ಹಿನ್ನೆಲೆ ಎಂದರೆ ರಾಘವೇಂದ್ರ ಹಾಗೂ ಶಿವರಾಜಕುಮಾರ್ ಇಬ್ಬರಿಗೂ ಕಿರಿಯ ವಯಸ್ಸಿನಲ್ಲಿಯೇ ಹೃದಯಾಘಾತ ಆಗಿದೆ. ಚಿಕಿತ್ಸೆ ಪಡೆದು ಅವರು ಗುಣವಾಗಿದ್ದಾರೆ. ಹಾಗಾಗಿ ಪುನೀತ್​ಗೆ ಹೃದಯಾಘಾತ ಆಗಲು ಕುಟುಂಬದ ಹಿನ್ನೆಲೆಯೂ ಕಾರಣ ಆಗಿರಬಹುದು ಎನ್ನುತ್ತಾರೆ ವೈದ್ಯರು.