ಬೆಂಗಳೂರು: ಸಮಾಜವಾದಿ ಎಂದು ಬಿಂಬಿತ ಸಿಎಂ ಸಿದ್ದರಾಮಯ್ಯ ಜಾತ್ಯತೀತ ಎಂದು ಹೇಳಿಕೊಳ್ಳುತ್ತಾರೆ. ಆದರೆ ತನ್ನ ಜಾತಿಗಾಗಿ ಮೌನ ಹೋರಾಟ ನಡೆಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಪರಿಶಿಷ್ಟ ಪಂಗಡಗಳಿಗೆ ಕುರುಬ ಸಮುದಾಯ ಸೇರ್ಪಡೆ ಸಂಬಂಧ ಅಧಿಕಾರಿಗಳು ಸಭೆ ನಡೆಸಲು ಮುಂದಾಗಿದ್ದಾರೆ. ಯಾವುದೇ ಸೂಚನೆಯಿಲ್ಲದೆ ಅಧಿಕಾರಿ ವರ್ಗ ಇಂತಹ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎಂದರು.
ಕುರುಬ ಸಮುದಾಯದಲ್ಲಿ ಬಡವರಿದ್ದರೆ ಅನುಕೂಲ ಮಾಡಿಕೊಡುವುದರಲ್ಲಿ ತಪ್ಪೇನಿಲ್ಲ. ಆದರೆ ಇನ್ನೊಬ್ಬರದು ಕಸಿದುಕೊಂಡು ಕೊಡುವುದು ಅನ್ಯಾಯವಾಗಲಿದೆ. ಪರಿಶಿಷ್ಟ ವರ್ಗಗಳ ಮೀಸಲು ಕಬಳಿಸುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಲಿದೆ ಎಂದು ದೂರಿದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಶಿಕ್ಷಣ, ಉದ್ಯೋಗದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲು ಪ್ರಮಾಣ ಹೆಚ್ಚಿಸಿ ಆದೇಶಿಸಿತು. ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ವರದಿ, ಶಿಾರಸು ಪ್ರಕಾರವೇ ಈ ನಿರ್ಧಾರ ತೆಗೆದುಕೊಂಡಿತ್ತು.
ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ಮೀಸಲು ಹೆಚ್ಚಳವೇ ಸಂವಿಧಾನಬಾಹಿರ ಎಂದಿದ್ದರು. ಸಿಎಂ ಆದ ನಂತರ ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳವನ್ನು ಒಪ್ಪಿಕೊಂಡು ದ್ವಂದ್ವ ನಿಲುವು ಬಹಿರಂಗಪಡಿಸಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಪರಿಶಿಷ್ಟ ಪಂಗಡಗಳ ಮೀಸಲು ಪ್ರಮಾಣವನ್ನು ಶೇ.3 ರಿಂದ 7ಕ್ಕೆ ಏರಿಸಲು ಒಪ್ಪದ ಸಿದ್ದರಾಮಯ್ಯನವರು ಇದೀಗ ಕುರುಬರನ್ನು ಎಸ್‌ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡಲು ವೇದಿಕೆ ಸಜ್ಜುಗೊಳಿಸುತ್ತಿದ್ದು, ತನ್ನ ಜಾತಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ.
ಪರಿಶಿಷ್ಟ ಪಂಗಡಗಳಿಗೆ ಕುರುಬ ಸಮುದಾಯ ಸೇರಬೇಕೋ ಅಥವಾ ಬಿಡಬೇಕೋ ಎನ್ನುವುದು ಕಾಯ್ದೆ ಪ್ರಕಾರ ನಿರ್ಧಾರವಾಗುತ್ತದೆ. ಆ ಜಾತಿ ಈಗಿರುವ ಪ್ರವರ್ಗದಲ್ಲಿ ಪಡೆಯುತ್ತಿರುವ ಮೀಸಲು ಪ್ರಮಾಣ ಸಹಿತ ಎಸ್‌ಟಿಗೆ ಸೇರ್ಪಡೆ ಶಿಾರಸು ಸೂಕ್ತವೆಂದರು.
ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಪೂರ್ಣ ತಿರಸ್ಕರಿಸಿಲ್ಲ, ತಡೆ ಕೂಡ ನೀಡಿಲ್ಲ. ಆದರೆ ಕೆಲವೊಂದು ಮಾರ್ಪಾಡುಗಳಿಗೆ ಸಲಹೆ ನೀಡಿದ್ದು, ಸರಿಯಾದ ದಿಕ್ಕಿನಲ್ಲಿ ಕೇಂದ್ರ ಹೆಜ್ಜೆಯಿಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.
ಕಂಡ ಕಂಡ ಆಸ್ತಿಗಳೆಲ್ಲ ವಕ್ಫ್ ಎಂದು ಬೋರ್ಡ್ ಹಾಕುವ ಕೆಲಸ ಮಾಡುತ್ತಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಇಂತಹ ಪ್ರಯತ್ನಗಳಿಗೆ ತೆರೆ ಬಿದ್ದಿದೆ ಎಂದು ಛಲವಾದಿ ನಾರಾಯಣಸ್ವಾಮಿ ವಿಶ್ಲೇಷಿಸಿದರು.