ನ್ಯೂಸ್

ಚುನಾವಣಾ ಸಮಯದಲ್ಲಿ ಅಹಿತಕರ ಘಟನೆಗಳು ಹೆಚ್ಚುತ್ತಿವೆ; ನ್ಯಾಯಯುತ ಚುನಾವಣೆ ನಡೆಯುವುದು ಅನುಮಾನ ಎಂದ ಸಿದ್ದರಾಮಯ್ಯ

ಬೆಂಗಳೂರು: ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ನಗರದಲ್ಲಿ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿವೆ. ಇದು ಕಳವಳಕಾರಿ ಸಂಗತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಸರ್ಕಾರದಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆಯುವುದು ಅನುಮಾನ. ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಆಗ್ರಹಿಸಿದ್ದಾರೆ.

ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ‌ ಭಾಗವಾಗಿರುವ ಸಾಧ್ಯತೆ ಇದೆ.‌ ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಧರ್ಮ ರಕ್ಷಣೆ ಹೆಸರಿನಲ್ಲಿ ರಾಜ್ಯದಲ್ಲಿ ಬಿಜೆಪಿ ಗೂಂಡಾ ಸಂಸ್ಕೃತಿ ಬೆಳೆಸಿತ್ತು. ಇದಕ್ಕೆ ಸಾತನೂರು ಬಳಿ ನಡೆದ ಯುವಕನ ಹತ್ಯೆಯೇ ಸಾಕ್ಷಿ. ಹತ್ಯೆಯ ಹೊಣೆಯನ್ನು ಅಸಮರ್ಥ ಗೃಹ ಸಚಿವ ಆರಗ ಜ್ಞಾನೇಂದ್ರರೇ ಹೊರಬೇಕು. ಅಸಮರ್ಥ‌, ಅದಕ್ಷ, ಬೇಜವಾಬ್ದಾರಿ ಗೃಹ‌ಸಚಿವರನ್ನು ಎಂದೂ ನೋಡಿರಲಿಲ್ಲ. ತನ್ನ‌ ಇಲಾಖೆ ಮೇಲೆ ಆರಗ ಜ್ಞಾನೇಂದ್ರಗೆ ನಿಯಂತ್ರಣ‌ವೇ ಇಲ್ಲ. ಇಂಥ ಸಚಿವರಿಗೆ ರಾಜ್ಯದ ಶಾಂತಿ‌, ಸುವ್ಯವಸ್ಥೆಯನ್ನು‌ ನಿರ್ವಹಿಸಲು‌ ಸಾಧ್ಯವೇ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.