ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿನ ವೇಗ, ನಿಯಂತ್ರಣ ಕ್ರಮಗಳ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನೇಲಿ ಕುಳಿತು ಮಾತಾಡ್ತಾರೆ. ವಿರೋಧಕ್ಕಾಗಿಯೇ ವಿರೋಧ ಮಾಡ್ತಾರೆ. ಈ ಸೋಂಕು ಕರ್ನಾಟಕಕ್ಕೆ ಮಾತ್ರ ಬಂದಿದೆ ಎಂಬ ಅರ್ಥದಲ್ಲಿ ಆರೋಪ ಮಾಡ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದರು.
ವಿಧಾನ ಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವೈಪಲ್ಯ ಕುರಿತು ಸಿದ್ದರಾಮಯ್ಯ ಆರೋಪ, ಟೀಕೆಗಳಿಗೆ ಪ್ರತಿಕ್ರಿಯಿಸಿದರು.
ಎಲ್ಲ ಸಚಿವರು ಕಳೆದ 1 ತಿಂಗಳಿಂದ ಫೀಲ್ಡ್‌ಗಿಳಿದು, ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸಿಎಂ ಬಿಎಸ್‌ವೈ ಒಪ್ಪಿಸಿದ ಜವಾಬ್ದಾರಿ ನಿರ್ವಹಿಸುತ್ತಿದ್ದು, ಲಕ್ಷಾಂತರ ಜನರನ್ನು ಭೇಟಿಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ವಿರೋಧ ಪಕ್ಷ ನಾಯಕರು ಸಲಹೆ-ಸೂಚನೆ ನೀಡುವುದಕ್ಕೆ ಬೇಡವೆನ್ನುವುದಿಲ್ಲ. ತಪ್ಪಿದ್ದರೆ ಎತ್ತಿ ತೋರಿಸಲಿ, ತಿದ್ದಿಕೊಳ್ಳುತ್ತೇವೆ. ಆದರೆ ಅನಗತ್ಯ ಆರೋಪ, ಇಲ್ಲಸಲ್ಲದ ಟೀಕೆ-ಟಿಪ್ಪಣಿಗಳನ್ನು ಖಂಡಿತ ಸಹಿಸಲಾಗದು ಎಂದು ಆರ್.ಅಶೋಕ್ ಕಿಡಿಕಾರಿದರು.
ಇದನ್ನೂ ಓದಿ: ಮಹಿಳೆಯೊಬ್ಬರ ಪತಿಗೆ ಜೀವ ನೀಡಲು ತಮ್ಮ ಬದುಕನ್ನು ಬಲಿಕೊಟ್ಟು ಕೊನೆಯುಸಿರೆಳೆದ ಆರ್ಎಸ್ಎಸ್ ಕಾರ್ಯಕರ್ತ
ಖಾಸಗಿ ಲ್ಯಾಬ್‌ಗಳು ಪರೀಕ್ಷಿಸಿದ ಮಾದರಿಯ ದತ್ತಾಂಶಗಳನ್ನು ಬಿಬಿಎಂಪಿ ಪೋರ್ಟ್‌ಗೆ ಅಪ್‌ಡೇಟ್ ಮಾಡುವುದು ವಿಳಂಬವಾಗುತ್ತಿದೆ. ಅಂತಹ ಖಾಸಗಿ ಲ್ಯಾಬ್‌ಗಳನ್ನು ಗುರುತಿಸಿ ಎಚ್ಚರಿಸಲಾಗಿದೆ. ಜತೆಗೆ ಬಿಬಿಎಂಪಿ ಡೇಟಾ ಅಪರೇಟರ್‌ಗಳನ್ನು ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಿ ಮಾಹಿತಿ ತರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಶಂಕುಸ್ಥಾಪನೆ, ಉದ್ಘಾಟನೆ ಸಮಾರಂಭಗಳು ರದ್ದು: ಮುಂದಿನ 2 ತಿಂಗಳು ಕಾಲ ರಾಜ್ಯಾದ್ಯಂತ ಶಂಕುಸ್ಥಾಪನೆ, ಉದ್ಘಾಟನೆ ಸಮಾರಂಭಗಳನ್ನು ನಡೆಸುವಂತಿಲ್ಲ. ಈ ಕುರಿತು ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ, ಜಿಲ್ಲಾ ಆಡಳಿತಗಳಿಗೆ ಸೂಚನೆ ರವಾನಿಸಲಾಗಿದೆ ಎಂದು ತಿಳಿಸಿದರು.