ನ್ಯೂಸ್

ಹಿಂದು- ಮುಸ್ಲಿಮರ ಮಧ್ಯೆ ಸಿದ್ದರಾಮಯ್ಯ ತಾರತಮ್ಯ: ಆರ್.ಅಶೋಕ್ ಟೀಕೆ | Power sharing tussle in Cong govt

ಬೆಂಗಳೂರು: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎರಡು ಮಕ್ಕಳು ಮಾಡಿಕೊಳ್ಳಿರಿ ಎಂದು ಸಲಹೆ ನೀಡಿದ್ದಾರೆ. ಹಿಂದುಗಳ ಸಂಖ್ಯೆ ಕಡಿಮೆಯಾಗಿಸುವ ಹುನ್ನಾರವಿದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಎರಡು ಮಕ್ಕಳ ಮಾಡಿಕೊಳ್ಳಿರಿ ಎಂಬ ಮಾತನ್ನು ಮುಸ್ಲಿಮರ ಬಳಿ ಹೋಗಿ ಹೇಳಲಿ. ಧರ್ಮಗಳ ನಡುವೆ ತಾರತಮ್ಯ ಮಾಡುವ ಬದಲು ರಾಜ್ಯದ ಮುಖ್ಯಮಂತ್ರಿಯಾಗಿ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಂಡು, ಒಟ್ಟುಗೂಡಿಸಿ ಕರೆದೊಯ್ಯಬೇಕು ಎಂದರು.

ಅಧಿಕಾರ ಹಂಚಿಕೆ ಸ್ಪಷ್ಟತೆ ಬೇಕು

ಆಡಳಿತ ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಅಧಿಕಾರ ಹಂಚಿಕೆಯಲ್ಲಿ ಮುಳುಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮಂಡ್ಯಕ್ಕೆ ಹೋಗಿ ಅಧಿಕಾರ ಕೊಡಿ ಎಂದು ಜನರ ಮುಂದೆ ಹೇಳಿದ್ದರು. ಈಗ ಶಾಸಕರ ಮುಂದೆ ಹೋಗಿ ಅಂಗಲಾಚುತ್ತಿದ್ದಾರೆ.

ಇವರ ಕಥೆ ಕತ್ತಲಲ್ಲಿ ಕರಡಿಯನ್ನು ಹುಡುಕುವಂತಾಗಿದೆ. ಈ ಪವರ್ ಶೇರಿಂಗ್ ಎಲ್ಲಿ ನಡೆದಿದೆ ಎಂಬುದನ್ನು ಜನರಿಗೆ ಸ್ಪಷ್ಟವಾಗಿ ತಿಳಿಸಲಿ ಎಂದು ಆರ್.ಅಶೋಕ್ ಒತ್ತಾಯಿಸಿದರು.

ಡಿ.ಕೆ.ಶಿವಕುಮಾರ್ ಶ್ಲೋಕ ಹೇಳಿದರೆ ಸಚಿವ ಕೆ.ಎನ್.ರಾಜಣ್ಣ ಟೀಕಿಸುತ್ತಿದ್ದಾರೆ. ಕೆಲವು ಶಾಸಕರು ಶಿವಕುಮಾರ್ ಮುಂದಿನ ಸಿಎಂ ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲ ಬಂದು ಹೋದ ಬಳಿಕವೂ ಈ ಸಮಸ್ಯೆ ನಿವಾರಣೆಯಾಗುವುದಿಲ್ಲ.

ಅಧಿಕಾರ ಹಂಚಿಕೆ ಬಗ್ಗೆ ಶಾಸಕರಿಗೆ ಸ್ಪಷ್ಟವಾಗಬೇಕಿದೆ. ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ಮಾತು ನೀಡಿದೆ ಎನ್ನಲಾಗುತ್ತಿದ್ದು, ಅದರ ಬಗ್ಗೆ ಸರಿಯಾಗಿ ತಿಳಿಸಲಿ ಎಂದರು.

ರಾಜ್ಯದಲ್ಲಿ ಆಡಳಿತ ನೆಲಕಚ್ಚಿದೆ, ಅಭಿವೃದ್ಧಿ ಕಾರ್ಯವನ್ನು ಟಾರ್ಚ್ ಹಾಕಿಕೊಂಡು ಹುಡುಕಬೇಕಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಇಂತಹ ಪಾಪಿ ಸರ್ಕಾರ ಯಾಕಾದರೂ ಬಂತೋ ಎಂದು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ಕಾಟಾಚಾರದ ಬಂಧನ

ಗೋವುಗಳು ಕೆಚ್ಚಲು ಕೊಯ್ದ ದುಷ್ಕೃತ್ಯದ ಹಿಂದೆ ಇರುವವರನ್ನು ಪತ್ತೆ ಹಚ್ಚಬೇಕು. ಕಾಟಾಚಾರಕ್ಕೆ ಒಬ್ಬನನ್ನು ಬಂಧಿಸಿದ್ದು, ಈತ ಬಿಹಾರದಿಂದ ಬಂದವನು ಎನ್ನಲಾಗಿದೆ. ಆದರೆ ಈ ವ್ಯಕ್ತಿ ಕಳೆದ 10 ವರ್ಷಗಳೀಂದ ನೆಲೆಸಿದ್ದು, ಆತನ ಅಣ್ಣನಿಗೆ ್ಯಾಕ್ಟರಿ ಕೂಡ ಇದೆ.

ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ಅಮಾನವೀಯ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು. ಒಬ್ಬ ವ್ಯಕ್ತಿಯನ್ನು ಬಂಧಿಸಿದ ಮಾತ್ರಕ್ಕೆ ಎಲ್ಲವೂ ಮುಗಿಯುವುದಿಲ್ಲ ಎಂದರು.

ಪಶು ಆಸ್ಪತ್ರೆ ಜಾಗವನ್ನು ವಕ್ಫ್‌ಗೆ ನೀಡಲು ಪ್ರಯತ್ನಿಸಲಾಗಿತ್ತು. ಸರ್ಕಾರವೇ ದಾಖಲೆಗಳನ್ನು ಸೃಷ್ಟಿಸಿ ದಾನಿಗಳ ಕೊಟ್ಟ 500 ಕೋಟಿ ರೂ. ಬೆಲೆ ಬಾಳುವ ಜಾಗ ಲೂಟಿಗೆ ಮುಂದಾಗಿತ್ತು. ಇದರ ವಿರುದ್ಧ ಹೋರಾಟ ಮಾಡಿದ ಕರ್ಣ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಅವರಿಗೆ ಸೇರಿ ಮೂರು ಹಸುಗಳ ಕೆಚ್ಚಲು ಕೊಯ್ದಿದ್ದಾರೆ ಎಂದು ದೂರಿದರು.

ಸಚಿವ ಜಮೀರ್ ಅಹ್ಮದ್ ಅವರು ಹಸುಗಳನ್ನು ನೀಡುವುದರಿಂದ ಪರಿಹಾರ ಸಿಗುವುದಿಲ್ಲ. ಪಾಶವಿ ಕೃತ್ಯ ಎಸಗಿದ ದುರುಳರು ಪತ್ತೆಯಾಗಿ, ನ್ಯಾಯ ಸಿಗಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.