siddaramaiah against central government 
ನ್ಯೂಸ್

ರಾಜಕೀಯ ಕಾರಣದಿಂದ ಕೇಂದ್ರ ಸರ್ಕಾರ ಅಕ್ಕಿ ವಿತರಣೆಗೆ ಹಿಂದೇಟು ಹಾಕುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದ್ದು, ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ.

ಅನ್ನಭಾಗ್ಯ ಯೋಜನೆ ಪೂರೈಸಲು ಕೇಂದ್ರ ಸರ್ಕಾರ(Central Government) ಅಕ್ಕಿ ಕೊಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿರುವ ಸಿಎಂ, ಇಂದು ಟೆಂಡರ್ ಮೂಲಕ ಅಕ್ಕಿ ಖರೀದಿ ಮಾಡುವ ಬಗ್ಗೆ ಪ್ರಸ್ತಾಪ ನಡೆಸಿದ್ದಾರೆ. ರಾಜಕೀಯ(Political) ಕಾರಣದಿಂದಲೇ ಅಕ್ಕಿ ವಿತರಣೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಕಾರಣವನ್ನು ಮುಂದಿಟ್ಟುಕೊಂಡು ಅವರು ಅಕ್ಕಿಯನ್ನು ಕೊಡಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

"ಅಕ್ಕಿಯನ್ನು ನೀಡಿದರೆ ಕಾಂಗ್ರೆಸ್ ಸರ್ಕಾರಕ್ಕೆ(Congress Government) ಲಾಭವಾಗಲಿದೆ. ನಮ್ಮ ಯೋಜನೆ ಸಫಲವಾಗಲಿದೆ ಎಂಬ ಹಿನ್ನೆಲೆ ನಮಗೆ ಅಕ್ಕಿ ಪೂರೈಕೆಗೆ ಕೇಂದ್ರ ಹಿಂದೇಟು ಹಾಕಿದೆ. ನಾವು ಶೀಘ್ರವೇ ಈ ಯೋಜನೆಯನ್ನು ಜಾರಿಗೊಳಿಸಲೇಬೇಕು! ಜನರ ವಿಶ್ವಾಸ ಉಳಿಸಿಕೊಳ್ಳಬೇಕು" ಎಂದು ಸಚಿವರಿಗೆ ಹೇಳಿದ್ದಾರೆ.

"ನಾವು ಜನರಿಗೆ ಅಕ್ಕಿಯನ್ನು ನೀಡುವ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೊಳಿಸಬೇಕು. ಛತ್ತೀಸಘಡ, ತೆಲಂಗಾಣ ಸರ್ಕಾರಗಳನ್ನು ನೋಡಿಕೊಂಡು ಮುಂದುವರೆಯೋಣ" ಎಂದು ಸಂಪುಟ ಸಭೆಯಲ್ಲಿ ಸಚಿವರೊಂದಿಗೆ ಸಿಎಂ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಸಚಿವರು ಬೆಂಬಲ ಸೂಚಿಸಿದ್ದು, ಹೊರ ರಾಜ್ಯದಿಂದ ಅಕ್ಕಿ ಖರೀದಿ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಹೆಚ್ಚುವರಿ ಹಣ ಎಷ್ಟು ಬರಬಹುದು ಎಂದು ಲೆಕ್ಕಾಚಾರದ ಕುರಿತು ಅಧಿಕಾರಿಗಳ ಅಂದಾಜು ಹಾಕಿದ್ದಾರೆ.