ನ್ಯೂಸ್

ಟಿವಿ, ಮೊಬೈಲ್​ ಬಳಕೆ ನಿರ್ಬಂಧಿಸಿದ್ದಕ್ಕೆ ಹೆತ್ತವರ ವಿರುದ್ಧವೇ FIR! ದೂರು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ ಪೋಷಕರು

ಇಂದೋರ್: ಇತ್ತೀಚಿನ ವರ್ಷಗಳಲ್ಲಿ ಯುವ ಪೀಳಿಗೆಯೂ ಹೆಚ್ಚಾಗಿ ಮೊಬೈಲ್​ ಬಳಕೆಗೆ ಅಡಿಕ್ಟ್​ ಆಗಿದ್ದು, ಅತಿ ಕಿರಿಯ ವಯಸ್ಸಿಗೆ ಒಂದಿಲ್ಲೊಂದು ಪ್ರಮಾದಕ್ಕೆ ಗುರಿಯಾಗುತ್ತಿದ್ದಾರೆ. ಪೋಷಕರು ಎಷ್ಟೇ ಪ್ರಯತ್ನಿಸಿದರು ಮಕ್ಕಳನ್ನು ಈ ಗೀಳಿನಿಂದ ಹೊರತರಲಾಗದೆ ಪರದಾಡುತ್ತಿದ್ದಾರೆ. ಇದೀಗ ಪೋಷಕರು ತಮ್ಮನ್ನು ಮೊಬೈಲ್​ ಬಳಸದಂತೆ, ಹೆಚ್ಚು ಸಮಯ ಟಿವಿ ನೋಡದಂತೆ ನಿರ್ಬಂಧಿಸುತ್ತಿದ್ದಾರೆ ಎಂದು ಆರೋಪಿಸಿ ಮಕ್ಕಳಿಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿ ಅದು ಹೈಕೋರ್ಟ್​ಗೆ ಹೋಗಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಪೋಷಕರು ಹೆಚ್ಚು ಕಾಲ ಮೊಬೈಲ್​ ಬಳಸದಂತೆ, ಟಿವಿ ನೋಡದಂತೆ ನಮ್ಮ ಮೇಲೆ ನಿರ್ಬಂಧ ಹೇರುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನಮ್ಮನ್ನು ಗದರುತ್ತಾರೆ ಮತ್ತು ಮನಬಂದಂತೆ ಥಳಿಸುತ್ತಾರೆ ಎಂದು ಆರೋಪಿಸಿ 21 ವರ್ಷದ ಯುವತಿ ಹಾಗೂ ಆಕೆಯ ಅಪ್ರಾಪ್ತ ವಯಸ್ಕ ಸಹೋದರ ಪೊಲೀಸ್​ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ಮಕ್ಕಳಿಗೆ ಕೌಂಟರ್ ಕೊಟ್ಟಿರುವ ತಂದೆ-ತಾಯಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ನಿಯಮದ ಪ್ರಕಾರ ಮಕ್ಕಳು ತಮ್ಮ ಪೋಷಕರ ವಿರುದ್ಧ ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಿರುವ ಸೆಕ್ಷನ್​ಗಳನ್ನು ಗಮನಿಸಿದಾಗ ಕನಿಷ್ಠ ಎಂದರು ಏಳು ವರ್ಷಗಳ ಸಜೆಯಾಗುತ್ತದೆ ಎಂದು ಹೇಳಲಾಗಿದೆ. ತಮ್ಮ ವಿರುದ್ಧ ದಾಖಲು ಮಾಡಿರುವ ಸೆಕ್ಷನ್​ಗಳನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್​ ಮೆಟ್ಟಿಲೇರಿದ್ದು, ಜಿಲ್ಲಾ ನ್ಯಾಯಾಲಯದಲ್ಲಿ ಪೋಷಕರ ವಿರುದ್ಧ ಆರಂಭವಾದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಎಫ್‌ಐಆರ್ ದಾಖಲಾದ ನಂತರ ಇಬ್ಬರೂ ಮಕ್ಕಳು ತಮ್ಮ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಾರೆ. ಎಫ್‌ಐಆರ್ ದಾಖಲಿಸುವ ಮುನ್ನ ಮಕ್ಕಳು ಮೊಬೈಲ್, ಟಿವಿ ಚಟದಿಂದ ದೂರ ಮಾಡಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದ್ದು, ಮಕ್ಕಳನ್ನು ಬೈಯುವುದು ಸಾಮಾನ್ಯ ಸಂಗತಿಯಾಗಿದೆ. ನಮ್ಮ ವಿರುದ್ಧ ದಾಖಲು ಮಾಡಿರುವ ಪ್ರಕರಣವನ್ನು ಕೂಡಲೇ ರದ್ದುಪಡಿಸಬೇಕೆಂದು ಪೋಷಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದೇವೆ.