ನ್ಯೂಸ್

ದೂರು ನೀಡಲು ಬಂದ ಯುವತಿಗೆ ಬೆಲ್ಟ್​ನಿಂದ ಹಲ್ಲೆ ಮಾಡಿ ಅಸಭ್ಯವಾಗಿ ವರ್ತಿಸಿದ ಎಸ್​ಐ..!

ತಿರುಪತಿ: ದೂರು ನೀಡಲು ಬಂದ ಯುವತಿಯ ಮೇಲೆ ಬೆಲ್ಟ್​ನಿಂದ ಹಲ್ಲೆ ಮಾಡಿ, ಅಸಭ್ಯವಾಗಿ ವರ್ತಿಸಿದ ಆರೋಪ ಆಂಧ್ರ ಪ್ರದೇಶದ ತಿರುಪತಿಯ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ಕೇಳಿಬಂದಿದೆ.

ದೂರಿನ ಪ್ರತಿಯನ್ನೂ ನೋಡದೆ ಯುವತಿಯ ಮೇಲೆ ಎಸ್​ಐ ಹಲ್ಲೆ ಮಾಡಿದ್ದು, ಈ ಸಂಬಂಧ ತನಿಖೆ ನಡೆಸಲು ಹಿರಿಯ ಪೊಲೀಸ್​ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಘಟನೆಯ ವಿವರಣೆಗೆ ಬರುವುದಾದರೆ ತಿರುಪತಿ ಉಪನಗರದ ಉಪ್ಪರಪಲ್ಲೆ ನಿವಾಸಿ ವನಿತಾವಾಣಿ ಹಾಗೂ ನೆರೆಮನೆಯವರ ನಡುವೆ ಯಾವುದೋ ಒಂದು ವಿಚಾರವಾಗಿ ವಾಗ್ವಾದ ನಡೆದಿತ್ತು. ಈ ವೇಳೆ ವ್ಯಕ್ತಿಯೊಬ್ಬ ವನಿತಾ ಮೇಲೆ ಹಲ್ಲೆ ಮಾಡಿದ್ದ. ಈ ಸಂಬಂಧ ದೂರು ನೀಡಲು ಎಂಆರ್​ ಪಲ್ಲಿ ಪೊಲೀಸ್​ ಠಾಣೆಗೆ ವನಿತಾ ತೆರಳಿದ್ದಳು.

ದೂರು ಸ್ವೀಕರಿಸದ ಎಸ್​ಐ, ನನ್ನ ಮೇಲೆ ಬೆಲ್ಟ್​ನಿಂದ ಹಲ್ಲೆ ಮಾಡಿದ್ದಲ್ಲದೆ, ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಯುವತಿ ಆರೋಪಿಸಿ, ಕಣ್ಣೀರಿಟ್ಟಿದ್ದಾಳೆ. ಎಸ್​ಐ ವಿರುದ್ಧ ಕ್ರಮ ಜರುಗಿಸುವಂತೆ ವನಿತಾ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು, ಪೊಲೀಸ್​ ವರಿಷ್ಠಾಧಿಕಾರಿ ರಮೇಶ್​ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ. (ಏಜೆನ್ಸೀಸ್​)