Shwetha Menon: ಅಶ್ಲೀಲ ಚಿತ್ರಗಳು, ಜಾಹೀರಾತುಗಳಲ್ಲಿ ನಟಿಸಿದ್ದಾರೆ ಎಂದು ಮಲಯಾಳಂ ನಟಿ ಶ್ವೇತಾ ಮೆನನ್ ವಿರುದ್ಧ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ, ಕೇರಳ ಹೈಕೋರ್ಟ್ಗೆ ಕೇಸ್ಗೆ ತಡೆ ನೀಡಿತ್ತು. ಇಷ್ಟೆಲ್ಲಾ ವಿವಾದದ ನಡುವೆಯೂ ಶ್ವೇತಾ ಮೆನನ್ ಮಲಯಾಳ ಚಲನಚಿತ್ರ ಸಂಸ್ಥೆ (AMMA)ದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಹಿರಿಯ ನಟ ಮೋಹನ್ ಲಾಲ್ 2024ರ ಆಗಸ್ಟ್ನಲ್ಲಿ AMMAದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಸುಮಾರು ಒಂದು ವರ್ಷದ ನಂತರ ಚುನಾವಣಾ ನಡೆದು ಫಲಿತಾಂಶ ಹೊರ ಬಿದ್ದಿದೆ. ಇಡೀ ಮಲಯಾಳ ಚಲನಚಿತ್ರ ಸಂಸ್ಥೆಯ ಇತಿಹಾಸದಲ್ಲೇ ಶ್ವೇತಾ ಮೆನನ್ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಯನ್ ಚೆರ್ತಾಲ ಮತ್ತು ಲಕ್ಷ್ಮೀ ಪ್ರಿಯಾ, ಪ್ರಧಾನ ಕಾರ್ಯದರ್ಶಿಯಾಗಿ ಕುಕ್ಕು ಪರಮೇಶ್ವರನ್, ಜಂಟಿ ಕಾರ್ಯದರ್ಶಿಯಾಗಿ ಅನ್ಸಿಬಾ ಹಸನ್, ಖಜಾಂಚಯಾಗಿ ಉನ್ನಿ ಶಿವಪಾಲ್ ಆಯ್ಕೆಯಾಗಿದ್ದಾರೆ.
ಗೆಲುವಿನ ಬಳಿಕ ಈ ಕುರಿತು ಮಾತನಾಡಿರುವ ಶ್ವೇತಾ ಮೆನನ್, "ನಾನು ಏನನ್ನೂ ಯೋಚಿಸಿಲ್ಲ, ನನಗೆ ಒಂದು ಕಾರ್ಯಸೂಚಿ ಇದೆ. ಇದು ತುಂಬಾ ದೊಡ್ಡ ಜವಾಬ್ದಾರಿ, ದಯವಿಟ್ಟು ಪವಾಡಗಳನ್ನು ನಿರೀಕ್ಷಿಸಬೇಡಿ. ಸಂಸ್ಥೆಯಲ್ಲಿ ಬದಲಾವಣೆ ತರಲು ಬಯಸಿದ್ದೇನೆ" ಎಂದು ಹೇಳಿದ್ದಾರೆ.
ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳ ಆರೋಪ ಸಂಬಂಧ ಕೇರಳ ಸರ್ಕಾರ ಸರ್ಕಾರ ರಚಿಸಿದ್ದ ನ್ಯಾ. ಕೆ.ಹೇಮಾ ಸಮಿತಿ ತನಿಖೆ ನಡೆಸಿ ವರದಿ ನೀಡಿದ ಹಿನ್ನೆಲೆ ಸಂಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ನಡೆದು ಆಡಳಿತ ಮಂಡಳಿಯ 17 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ರಾಜೀನಾಮೆ ನೀಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ ನೀಡಿದ್ದರು.
ನ್ಯಾಯಮೂರ್ತಿ ಹೇಮಾ ಸಮಿತಿಯ ಸಂಶೋಧನೆಗಳು ಉದ್ಯಮದೊಳಗೆ ಆಳವಾಗಿ ಬೇರೂರಿದ್ದ ಸಮಸ್ಯೆಗಳನ್ನು ಬಹಿರಂಗಪಡಿಸಿತ್ತು. 10 ರಿಂದ 15 ಪುರುಷ ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ಸಣ್ಣ ಗುಂಪು ಪ್ರಬಲ ನಿಯಂತ್ರಣವನ್ನು ಹೊಂದಿತ್ತು ಎಂದು ವರದಿ ಹೇಳಿತು. 235 ಪುಟಗಳ ವರದಿಯ ಪರಿಷ್ಕೃತ ಆವೃತ್ತಿಯನ್ನು ನಂತರ ಸಾರ್ವಜನಿಕಗೊಳಿಸಲಾಯಿತು. ಹಲವಾರು ಮಹಿಳಾ ನಟಿಯರು ಎತ್ತಿದ ಕಳವಳಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (SIT) ಅನ್ನು ರಚಿಸಿತು.
ಶ್ವೇತಾ ಮೆನನ್ ವಿವಾದ
ಕಳೆದ ವಾರ ನಟಿ ಶ್ವೇತಾ ಲಾಭಗಳಿಸುವ ಉದ್ದೇಶದಿಂದ ಹಿಂದೆ ಕೆಲವು ಚಲನಚಿತ್ರಗಳು ಮತ್ತು ಕಾಂಡೋಮ್ ಜಾಹೀರಾತುಗಳಲ್ಲಿ ಅಶ್ಲೀಲ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂದು ಆರೋಪಿಸಿ ಎರ್ನಾಕುಲಂ ಠಾಣೆಗೆ ಮಾರ್ಟಿನ್ ಮೆನಚೇರಿ ಎಂಬುವವರು ದೂರು ನೀಡಿದ್ದರು. ಈ ಸಂಬಂಧ ದಾಖಲಾಗಿದ್ದ ಎಫ್ಐಆರ್ ರದ್ದು ಪಡಿಸುವಂತೆ ಕೋರಿ ಕೇರಳ ಹೈಕೋರ್ಟ್ ಶ್ವೇತಾ ಮೆನನ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ ವಿಚಾರಣೆಗೆ ತಡೆ ದೂರುದಾರರಿಗೆ ನೋಟಿಸ್ ಜಾರಿ ಮಾಡಿದೆ.
ಮೆನನ್ ಅವರು ಸಾಲ್ಟ್ ಎನ್ ಪೆಪ್ಪರ್, ರಥಿನಿರ್ವೇದಂ ಮತ್ತು ಕಲಿಮಣ್ಣು ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಪಾಲೇರಿ ಮಾಣಿಕ್ಯಂನಲ್ಲಿನ ನಟನೆಗಾಗಿ ಕೇರಳ ಸರ್ಕಾರ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯನ್ನು ನೀಡಿದೆ.(ಏಜೆನ್ಸೀಸ್)