ನ್ಯೂಸ್

ಜಾಗ್ರತೆ ವಹಿಸಿದರೆ ಕರೊನಾ ಹೋಗಲಾಡಿಸಬಹುದು

ನಂಜನಗೂಡು: ಎಲ್ಲರ ಶ್ರಮದ ಫಲವಾಗಿ ಮೈಸೂರು ಜಿಲ್ಲೆಯಲ್ಲಿ ಕರೊನಾ ಸೋಂಕನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿದ್ದು ಉದಾಸೀನ ಮಾಡದೆ ಜಾಗ್ರತೆ ವಹಿಸಿದರೆ ಮಾತ್ರ ಮುಂಬರುವ ದಿನಗಳಲ್ಲಿ ಕರೊನಾವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಕರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ 500 ಜನ ಆಟೋ ಚಾಲಕರಿಗೆ ಮೈಸೂರು ನಾಗರಿಕ ವೇದಿಕೆಯಿಂದ ನೀಡಲಾದ ಆಹಾರ ಪದಾರ್ಥಗಳ ದಿನಸಿ ಕಿಟ್‌ಗಳನ್ನು ಶ್ರೀಕಂಠೇಶ್ವರಸ್ವಾಮಿ ದೇವಾಲಯ ಮುಂಭಾಗದಲ್ಲಿ ಸೋಮವಾರ ವಿತರಿಸಿ ಮಾತನಾಡಿದರು.
ಮನುಷ್ಯನಿಗೆ ಜೀವ ಮುಖ್ಯ.ನಂತರ ಜೀವನ. ಜೀವವನ್ನು ಕಾಪಾಡಿಕೊಳ್ಳಲು ಎಲ್ಲರೂ ಎಚ್ಚರ ವಹಿಸಬೇಕು. ಮೈಸೂರು ನಾಗರಿಕರ ವೇದಿಕೆ ಈ ಹಿಂದೆ ಅತಿವೃಷ್ಟಿ ಸಂಭವಿಸಿದಾಗಲೂ ಸಹಾಯಹಸ್ತ ನೀಡಿತ್ತು. ಇಂದು 500ಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದರು.
ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಇತ್ತೀಚೆಗೆ ಮೈಸೂರಿನಲ್ಲಿ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ನಮ್ಮ ಕ್ಷೇತ್ರಕ್ಕೂ ನಾಗರಿಕ ವೇದಿಕೆಯಿಂದ ರೇಷನ್ ಕಿಟ್ ವಿತರಿಸಲು ಕಾರ್ಯಕ್ರಮ ರೂಪಿಸಬೇಕೆಂದು ಮನವಿ ಮಾಡಿದಾಗ ಶ್ರೀಗಳು ಒಪ್ಪಿಗೆ ಸೂಚಿಸಿ ನೆರವು ನೀಡಿದ್ದಾರೆ ಎಂದು ಸ್ಮರಿಸಿದರು.
ವೇದಿಕೆಯ ಸಂಚಾಲಕ ವಾಸುದೇವಭಟ್ ಮಾತನಾಡಿ, ಮೈಸೂರಿನಲ್ಲಿ ಆಧಾರ್ ಕಾರ್ಡ್ ಇದ್ದರೂ ರೇಷನ್ ಕಾರ್ಡ್ ಇಲ್ಲದಂತಹ 550 ಕುಟುಂಬವನ್ನು ಗುರುತಿಸಿ ರೇಷನ್ ಕಿಟ್ ವಿತರಿಸಲಾಯಿತು. ಆ ವೇಳೆ ಹಾಜರಿದ್ದ ಶಾಸಕ ಬಿ.ಹರ್ಷವರ್ಧನ್ ಅವರು ನಮ್ಮ ಕ್ಷೇತ್ರದಲ್ಲೂ ರೇಷನ್ ಕಿಟ್ ವಿತರಿಸಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲೂ ವಿತರಿಸಲಾಗಿದೆ ಎಂದರು.
ಇದಕ್ಕೂ ಮೊದಲು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು. ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯ್ಕ, ಕಾರ್ಯಕಾರಿಣಿ ಸದಸ್ಯ ಕುಂಬ್ರಹಳ್ಳಿ ಸುಬ್ಬಣ್ಣ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎಂ.ಕೆಂಪಣ್ಣ, ಜಿಪಂ ಸದಸ್ಯ ಸದಾನಂದ, ಪ್ರಥಮದರ್ಜೆ ಗುತ್ತಿಗೆದಾರ ಯು.ಎನ್.ಪದ್ಮನಾಭರಾವ್, ದೇಗುಲ ವ್ಯವಸ್ಧಾಪನಾ ಸಮಿತಿ ಅಧ್ಯಕ್ಷ ಇಂಧನ್‌ಬಾಬು, ಸದಸ್ಯರಾದ ಎನ್.ಟಿ.ಗಿರೀಶ್,ಶ್ರೀಧರ್, ಶಶಿರೇಖ, ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಮಹೇಶ್, ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸ್‌ರೆಡ್ಡಿ, ಬಾಲಚಂದ್ರು, ಕೆಂಡಗಣ್ಣಪ್ಪ, ವಿನಯ್‌ಕುಮಾರ್, ವಕೀಲ ನಂಜುಂಡಸ್ವಾಮಿ, ತಹಸೀಲ್ದಾರ್ ಕೆ.ಎಂ. ಮಹೇಶ್‌ಕುಮಾರ್, ನಗರಸಭಾ ಆಯುಕ್ತ ಕರಿಬಸವಯ್ಯ ಹಾಜರಿದ್ದರು.