ತಿ.ನರಸೀಪುರ: ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮಂಗಳವಾರ ಶ್ರೀಮರುಡೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ದೇವತೆಗಳ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದಲ್ಲಿ ಸೋಮವಾರ ರಾತ್ರಿಯಿಂದಲೇ ಹೋಮ, ರಂಗ ಪ್ರವೇಶ, ತಂಪೋತ್ಸವ, ದೇವರು ಕರೆಯುವುದು, ಕೊಂಡಕ್ಕೆ ಬೆಂಕಿ ಹಾಕುವುದು ಹಾಗೂ ಕೇಲು ತರುವುದು ಶುರುವಾದವು. ನಂತರ ಮರುಡೇಶ್ವರ, ಮಹದೇಶ್ವರ, ಮಾರಮ್ಮ, ಪಾತಾಳೇಶ್ವರ, ಲಕ್ಷ್ಮೀದೇವಿ, ಕಾಳಿಕಾದೇವಿ, ಸಿದ್ದಪ್ಪಾಜಿ ದೇವರುಗಳೊಂದಿಗೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ನಂತರ ಮರುಡೇಶ್ವರಸ್ವಾಮಿ ದೇವಸ್ಥಾನದಲ್ಲಿ ತಣ್ಣೀರಿನಲ್ಲಿ ದೀಪ ಬೆಳಗಿ ಪ್ರಸಾದ ನೀಡಿದ ನಂತರ ಕೊಂಡೋತ್ಸವ ನೆರವೇರಿತು.
ನಂತರ ರಾತ್ರಿ ಗಿರಿಜಾ ಕಲ್ಯಾಣ ಹಾಗೂ ವಿವಿಧ ದೇವರ ಕಾರ್ಯಗಳು ಬಹಳ ವಿಜೃಂಭಣೆಯಿಂದ ನೆರವೇರಿದವು. ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಂಗೋಲಿ ಬಿಡಿಸಿ, ಬಾಳೆಕಂಬ, ಮಾವಿನ ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು.
ನಿಲಸೋಗೆ , ಚನ್ನಬಸವಯ್ಯಹುಂಡಿ, ಮರಡಿಪುರ, ಹಿರಿಯೂರು, ದೊಡ್ಡನಹುಂಡಿ, ಶಂಭುದೇವನಪುರ, ತೊಟ್ಟವಾಡಿ ಗ್ರಾಮಗಳ ಭಕ್ತರು ಆಗಮಿಸಿ ಕೊಂಡೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಗ್ರಾಮದ ಮುಖಂಡರು ಹಾಗೂ ಎಲ್ಲ ಕೋಮಿನ ಯಜಮಾನರು ಹಾಜರಿದ್ದು ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಲು ಸಹಕಾರ ನೀಡಿದರು.