ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ ಶ್ರಾವಣ ಧರ್ಮ ಸಮಾರಂಭದಲ್ಲಿ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ರಂಭಾಪುರಿ ಬೆಳಗು ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಶಿವಪ್ರಸಾದ, ಅಭಿನವ ಕಾರ್ತಿಕೇಶ್ವರ ಶ್ರೀ, ಉಮೇಶ್ವರ ಶ್ರೀ ಇತರರಿದ್ದರು. 
ನ್ಯೂಸ್

ಸ್ವಾರ್ಥರಹಿತ ಬದುಕಿಗೆ ಬೆಲೆ ಬಲವಿದೆ

ಬಾಳೆಹೊನ್ನೂರು: ಬದುಕು ಕೊಟ್ಟ ಭಗವಂತನ ಶಕ್ತಿ ಅದ್ಭುತ. ಆಧ್ಯಾತ್ಮಿಕ ಬದುಕಿಗೆ ಧರ್ಮ ಆಶಾಕಿರಣ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂಸ್ಕಾರ ಬದುಕನ್ನು ಉಜ್ವಲಗೊಳಿಸುತ್ತದೆ. ಸ್ವಾರ್ಥವನ್ನು ಗೆದ್ದವನು, ಶಾಂತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ನಿಜವಾದ ಸುಖಿ. ಹಸಿದು ಉಣ್ಣುವುದು ಪ್ರಕೃತಿ ಧರ್ಮ. ಹಂಚಿ ಉಣ್ಣುವುದು ಸಂಸ್ಕೃತಿಯ ಗುಣ. ಮನಸ್ಸಿಟ್ಟು ಮಾಡಿದ ಕೆಲಸ, ಕಷ್ಟಪಟ್ಟು ದುಡಿದ ಹಣ, ಹಲವರೊಂದಿಗೆ ಹಂಚಿ ತಿನ್ನುವ ಗುಣ, ಭಕ್ತಿಯಿಂದ ಮಾಡುವ ದೇವರ ಪೂಜೆ ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲವೆಂಬ ನಂಬಿಕೆ ಕಳೆದುಕೊಳ್ಳಬಾರದು ಎಂದರು.
ಕತ್ತಲಲ್ಲಿ ನಡೆಯುವಾಗ ಬೆಳಕಿನ, ಬಿಸಿಲಿನಲ್ಲಿ ನಡೆಯುವಾಗ ನೆರಳಿನ ಅವಶ್ಯಕತೆಯಿದೆ. ಜೀವನದ ದಾರಿಯಲ್ಲಿ ಸಾಗುವಾಗ ಒಳ್ಳೆಯ ಸ್ನೇಹಿತರ ಮತ್ತು ಮಾರ್ಗದರ್ಶಕರ ಅವಶ್ಯಕತೆಯಿದೆ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿ ಇರಬೇಕೆಂದು ಮಹಾತ್ಮರು ನುಡಿದಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ನೊಂದವರ ಧ್ವನಿಯಾಗಿ ಸತ್ಕಾರ್ಯಗಳನ್ನು ಮಾಡಿದ ಶ್ರೇಯಸ್ಸು ಅವರಿಗಿದೆ. ಮೌಲ್ಯಾಧಾರಿತ ಬದುಕನ್ನು ಅಳವಡಿಸಿಕೊಂಡು ಬಾಳಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಇದೇ ಸಂದರ್ಭದಲ್ಲಿ ಸೆಪ್ಟಂಬರ್‌ನ ರಂಭಾಪುರಿ ಬೆಳಗು ಪತ್ರಿಕೆಯನ್ನು ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.
ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ ಮಾತನಾಡಿ, ಹೊಗಳಿಕೆ ಮತ್ತು ತೆಗಳಿಕೆ ಸಹಜವಾಗಿದ್ದು ಎಲ್ಲರ ಜೀವನದಲ್ಲಿ ನಡೆಯುವ ಘಟನೆಗಳನ್ನು ಸ್ವೀಕರಿಸಿ. ಹೂವು ಅರಳಿ ಮಿನುಗಲು ಸೂರ್ಯನ ಬೆಳಕು ಮತ್ತು ಮಳೆ ಎರಡೂ ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಮಚಿತ್ತ ಬದುಕನ್ನು ಕಟ್ಟಿಕೊಳ್ಳಲು ಕೊಟ್ಟ ಸಂದೇಶಗಳನ್ನು ಯಾರೂ ಮರೆಯಬಾರದು ಎಂದರು.
ಧರ್ಮ ಸಮಾರಂಭದಲ್ಲಿ ಮಳಖೇಡ ಕಾರ್ತಿಕೇಶ್ವರ ಮಠದ ಅಭಿನವ ಕಾರ್ತಿಕೇಶ್ವರ ಶ್ರೀಗಳು, ದೇವರಭೂಪುರ ಬೃಹನ್ಮಠದ ಅಭಿನವ ಗಜದಂಡ ಶ್ರೀಗಳು, ರಾಮಗೇರಿ ಮಠದ ಉಮೇಶ್ವರ ಶ್ರೀ, ಮಾವನೂರು ಬೃಹನ್ಮಠದ ವಿರುಪಾಕ್ಷ ಶ್ರೀ, ರಟ್ಟೀಹಳ್ಳಿ ವಿಶ್ವೇಶ್ವರ ಪಾಲ್ಗೊಂಡಿದ್ದರು.
ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು. ಜಡೆಯ ಸಾಲಿಗೆ ರಾಜಣ್ಣ, ಕೊಟ್ಟೂರಿನ ವಿಶ್ವನಾಥ, ಹಳ್ಯಾಳದ ಗುರುನಾಥಗೌಡ ಮಾದಾಪುರ, ಶಿವನಗೌಡ ಹೊಸಮನಿ, ಗಂಗಾಧರಸ್ವಾಮಿ ಹಿರೇಮಠ ಮತ್ತಿತರರಿದ್ದರು.